ಚಿಕ್ಕಮಗಳೂರು : ವ್ಯಾಪಾರಸ್ಥರು ಮತ್ತು ಉದ್ದಿಮೆದಾರರ ಮೇಲೆ ಏಕಾಏಕಿ ಹೇರಿರುವ ಪರವಾನಗಿ ಶುಲ್ಕವನ್ನು ಕಡಿಮೆ ಮಾಡುವಂತೆ ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಪದಾಧಿಕಾರಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿದ ಸಂಸ್ಥೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿ ಟ್ರೇಡ್ ಲೈಸೆನ್ಸ್ ಶುಲ್ಕ ಹೆಚ್ಚಳದ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾ ಲಾಕ್ ಡೌನ್ ನಿಂದಾಗಿ ಕಳೆದ ಮೂರು ವರ್ಷಗಳಿಂದ ವ್ಯಾಪಾರಸ್ಥರು ಮತ್ತು ಉದ್ದಿಮೆದಾರರು ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ, ರೈತರು, ಬೆಳೆಗಾರರು, ಕೃಷಿ ಕಾರ್ಮಿಕರು ಮತ್ತು ಸಾರ್ವಜನಿಕರಲ್ಲಿ ಹಣದ ಹರಿವು ಕಡಿಮೆಯಾಗಿರುವುದರಿಂದ ಉದ್ದಿಮೆದಾರರು ವ್ಯಾಪಾರವಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದರು.
ವ್ಯಾಪಾರ ವಹಿವಾಟು ಕುಸಿದಿರುವುದರಿಂದಾಗಿ ಈಗಾಗಲೇ ಹೆಚ್ಚಿಸಲಾಗಿರುವ ಬಾಡಿಗೆ ಮತ್ತು ವಿದ್ಯುತ್ ಬಿಲ್ ಪಾವತಿಸಲಾಗದೇ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ, ಇದರ ನಡುವೆ ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಏಕಾಏಕಿ ಶೇ.100 ರಷ್ಟು ಹೆಚ್ಚಳ ಮಾಡಿರುವುದು ವ್ಯಾಪಾರ ಮತ್ತು ಉದ್ಯಮಗಳಿಗೆ ದೊಡ್ಡ ಹೊರೆಯಾಗಿದೆ ಎಂದು ಅಳಲು ತೋಡಿಕೊಂಡರು.
ಈ ಸಂಬಂಧ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಪದಾಧಿಕಾರಿಗಳು ಉದ್ಯಮಗಳನ್ನು ಉಳಿಸುವ ನಿಟ್ಟಿನಲ್ಲಿ ಕೂಡಲೇ ಪರವಾನಗಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಸಮವಸ್ತ್ರವನ್ನು ಪ್ರತಿವರ್ಷ ಬದಲಾಯಿಸಲಾಗುತ್ತಿದೆ, ಇದರಿಂದಾಗಿ ಬಡ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಹೇಳಿದರು.
ಬಡ ವಿದ್ಯಾರ್ಥಿಗಳು ಮತ್ತು ಪೋಷಕರ ಹಿತದೃಷ್ಠಿಯಿಂದ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಮವಸ್ತ್ರವನ್ನು ಕನಿಷ್ಠ ಐದು ವರ್ಷದವರೆಗೆ ಬದಲಾಯಿಸದೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಅಧ್ಯಕ್ಷ ಆರ್.ಎಂ.ಮಹೇಶ್, ಕಾರ್ಯದರ್ಶಿ ಎಂ.ಎಸ್.ವಿಜಯೇಂದ್ರ, ನಿರ್ದೇಶಕರಾದ ವಾಸುದೇವ್, ಮಂಜಪ್ಪ, ದೇವಿಪ್ರಸಾದ್, ಗೌತಮ್‍ಚಂದ್ ಜೈನ್, ಆನಂದ್‍ಕುಮಾರ್ ಶೆಟ್ಟಿ ಹಾಜರಿದ್ದರು.










