ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ – ಲಕ್ಷಾಂತರ ನಗದು, ಚಿನ್ನಾಭರಣ ವಶ…

45
firstsuddi

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರದ ಮಾಡಾಳ್ ವಿರೂಪಾಕ್ಷಪ್ಪನವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸತತ 10 ಕ್ಕೂ ಹೆಚ್ಚು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಮಾಡಾಳ್ ನಿವಾಸದಲ್ಲಿ 2,800 ಗ್ರಾಂ ಚಿನ್ನಾಭರಣ, 20 ಕೆಜಿ ಬೆಳ್ಳಿ ಆಭರಣಗಳು, 16.5 ಲಕ್ಷ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿವೆ.

ಲಂಚ ಸ್ವೀಕರಿಸುತ್ತಿದ್ದ ವೇಳೆ ಶಾಸಕರ ಪುತ್ರ ಮಾಡಾಳ್ ಪ್ರಶಾಂತ್ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬೆನ್ನಲ್ಲೇ ಚನ್ನಗಿರಿಯಲ್ಲೂ ಲೋಕಾಯುಕ್ತರು ದಾಳಿ ನಡೆಸಿದ್ದರು. ವಿರೂಪಾಕ್ಷಪ್ಪರ ಮನೆ ಮೇಲೆ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ 20ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ರಾತ್ರಿ ತನಕ ಪರಿಶೀಲನೆ ನಡೆಸಿದ್ದಾರೆ.

ಸತತ ಹತ್ತು ಗಂಟೆಗಳ ಕಾಲ ಶೋಧ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅಲ್ಲಿ ದೊರೆತ ನಗದು, ಚಿನ್ನ, ಬೆಳ್ಳಿ ಹಾಗೂ ಆಸ್ತಿ ಪತ್ರಗಳನ್ನು ಪಟ್ಟಿ ಮಾಡಿದ್ದು ಇದಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪತ್ನಿ ಲೀಲಾವತಿಯವರಿಂದ ಸಹಿ ಪಡೆದಿದ್ದಾರೆ. ಇದಕ್ಕೂ ಮುನ್ನ ಚನ್ನೇಶಪುರ ಗ್ರಾಮದಲ್ಲಿರುವ ಶಾಸಕರ ನಿವಾಸ, ಮಾವಿನಹೊಳೆ ಬಳಿ ಇರುವ ಮಾಡಾಳ್ ಕುಟುಂಬದ ಕ್ರಷರ್ ಕಚೇರಿ, ಮಾವಿನಕಟ್ಟೆ ಗ್ರಾಮದ ಬಳಿ ಇರುವ ತೋಟದ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಿದ್ದರು.

ಸದ್ಯ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರ ಮೂರು ತಂಡಗಳಿಂದ ಹುಟುಕಾಟ ನಡೆಸಲಾಗುತ್ತಿದೆ.