ಶಿಕ್ಷಣ ಲಾಭ ಗಳಿಸುವ ವ್ಯವಹಾರವಲ್ಲ, ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು : ಸುಪ್ರೀಂಕೋರ್ಟ್.

60
firstsuddi

ನವದೆಹಲಿ : ಶಿಕ್ಷಣವು ಲಾಭ ಗಳಿಸುವ ವ್ಯವಹಾರವಲ್ಲ. ಬೋಧನಾ ಶುಲ್ಕ ಯಾವಾಗಲೂ ಕೈಗೆಟುಕುವಂತಿರಬೇಕು ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಎಂಬಿಬಿಎಸ್ ವಿದ್ಯಾರ್ಥಿಗಳು ಪಾವತಿಸಬೇಕಾದ ಬೋಧನಾ ಶುಲ್ಕವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್ ನ ಆದೇಶವನ್ನು ಎತ್ತಿ ಹಿಡಿದಿದೆ.

2011ರಲ್ಲಿ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಏಳು ಪಟ್ಟು ಹೆಚ್ಚಿರುವ ವಾರ್ಷಿಕ ಶುಲ್ಕವನ್ನು 24 ಲಕ್ಷ ರೂ.ಗಳಿಗೆ ಹೆಚ್ಚಿಸಿರುವ 2017ರ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ. ಈ ಹಿಂದೆ ನಿಗದಿಪಡಿಸಿದ್ದ ಶುಲ್ಕಕ್ಕಿಂತ 7 ಪಟ್ಟು ಶುಲ್ಕವನ್ನು 24 ಲಕ್ಷ ರೂ.ಗೆ ಹೆಚ್ಚಿಸಿರುವುದು ಸಮರ್ಥನೀಯವಲ್ಲ. ಶಿಕ್ಷಣವು ಲಾಭ ಗಳಿಸುವ ವ್ಯವಹಾರವಲ್ಲ. ಬೋಧನಾ ಶುಲ್ಕ ಯಾವಾಗಲೂ ಕೈಗೆಟುಕುವಂತಿರಬೇಕು ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಸರ್ಕಾರ ಹಾಗೂ ಮೇಲ್ಮನವಿದಾರರಾಗಿರುವ ವೈದ್ಯಕೀಯ ಕಾಲೇಜು, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (NALSA) ಹಾಗೂ ಸುಪ್ರೀಂ ಕೋರ್ಟ್ ನ ಮಧ್ಯಸ್ಥಿಕೆ ಮತ್ತು ಸಮನ್ವಯ ಯೋಜನಾ ಸಮಿತಿ (MCPC)ಗೆ ತಲಾ 2.5 ಲಕ್ಷ ದಂಡ ಪಾವತಿಸುವಂತೆ ಸೂಚಿಸಿದೆ. ಜೊತೆಗೆ 2017ರ ಸೆಪ್ಟಂಬರ್ ನಲ್ಲಿ ಹೊರಡಿಸಲಾದ ಸರ್ಕಾರಿ ಆದೇಶ (GO) ಅಡಿಯಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿದ ಶುಲ್ಕವನ್ನು ಮರುಪಾವತಿಸಬೇಕೆಂದು ಕೋರ್ಟ್ ಸೂಚಿಸಿದೆ.