ಬೆಂಗಳೂರು : ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೇರಳ ಗಡಿ ದಾಟಿ ಕೊಲೆಗಾರರ ಹಿಡಿಯಲು ಹೋಂ ಮಿನಿಸ್ಟರ್, ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಯಾರೂ ಇಲ್ಲದಿರುವಾಗ ಕೊಲೆ ನಡೆದಿದೆ. ಹಿಂದಿನಿಂದ ಬಂದು ಕೊಲೆ ಮಾಡಿದ್ದಾರೆ. ಕೊಲೆಗಡುಕರ ದಸ್ತಗಿರಿ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಇದು ಒಂದು ವ್ಯವಸ್ಥಿತ ಸಂಚು. ಕ್ಷೋಬೆ ಉಂಟು ಮಾಡುವ ವರ್ಗದಿಂದ ಕೊಲೆ ಮಾಡಲಾಗಿದೆ. ಆ ವರ್ಗವನ್ನು ಸದೆ ಬಡಿಯುವ ಕೆಲಸ ಮಾಡ್ತೇವೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಾಯಕ ಕೊಲೆಯಾದಗ ಆಕ್ರೋಶವಿರುತ್ತೆ. ಜನರಿಗೆ ಶಾಂತಿ ಕಾಪಾಡಲು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಇನ್ನೂ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಇದೊಂದು ದುರಾದೃಷ್ಟಕರ ಸಂಗತಿ. ಒಬ್ಬ ಅಮಾಯಕ ಯುವಕ ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಕೊಲೆಯಾಗಿದ್ದಾನೆ. ಬೈಕ್ ನಲ್ಲಿ ಬಂದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಪ್ರವೀಣ್ ಕೇರಳದ ಗಡಿಯಲ್ಲಿದ್ದರು. ಹೀಗಾಗಿ ಕೇರಳ ಸರ್ಕಾರದ ಜೊತೆಗೂ ನಮ್ಮ ಪೊಲೀಸರು ಮಾತನಾಡಿದ್ದಾರೆ. ಅಲ್ಲೂ ಕಾರ್ಯಾಚರಣೆ ನಡೆಯುತ್ತಿದೆ. ನಾನು, ಸಿಎಂ ರಾತ್ರಿಯೇ ಪೊಲೀಸರ ಜೊತೆ ಮಾತಾಡಿದ್ದೇವೆ. ಅಗತ್ಯ ಸೂಚನೆ ನೀಡಿದ್ದೇವೆ. ಇದೀಗ ಪೊಲೀಸರು ಕೊಲೆಗಡುಕರ ಬೆನ್ನಟ್ಟಿದ್ದಾರೆ ಎಂದು ತಿಳಿಸಿದ್ದಾರೆ.










