ಮೈಸೂರು : ನಗರದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮಾನಸ ಗಂಗೋತ್ರಿ ಆವರಣ, ಪ್ರಸಿದ್ಧ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸಂಜೆ 6.30ರ ಬಳಿಕ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದಕ್ಕೆ ನಿಷೇಧ ಹೇರಲಾಗಿದೆ. ಸುರಕ್ಷತೆ ದೃಷ್ಟಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದ್ದು, ಈ ಕುರಿತು ಮೈಸೂರು ವಿವಿ ಕುಲಸಚಿವರಿಂದ ಸುತ್ತೋಲೆ ಹೊರಡಿಸಿದ್ದಾರೆ. ಪೊಲೀಸ್ ಇಲಾಖೆ ಮೌಖಿಕ ನಿರ್ದೇಶನ ಮೇರೆಗೆ ಆದೇಶಿಸಲಾಗಿದೆ ಎಂದು ವಿವಿ ಹೇಳಿದೆ.
ಮೈಸೂರು ವಿವಿ ಹೊರಡಿಸಿರೋ ಆದೇಶ ಇದೀಗ ವಿವಾದಕ್ಕೀಡಾಗಿದೆ. ವಿದ್ಯಾರ್ಥಿನಿಯರು ಈ ನಿರ್ಧಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಯುವತಿಯರಿಗೆ ನೀಡಲಾಗುತ್ತಿರುವ ನಿಜವಾದ ಸ್ವಾತಂತ್ರ್ಯ ಇದೇನಾ ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿವಿ ಆದೇಶವನ್ನು ಪುನರ್ ವಿಮರ್ಶೆ ಮಾಡುವುದಾಗಿ ತಿಳಿಸಿದೆ.










