ಚಿಕ್ಕಮಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದರ ಮೇಲೆ ದಾಳಿ ನಡೆಸಿರುವ ಚಿಕ್ಕಮಗಳೂರು ಪೊಲೀಸರು ಒಂದು ಕ್ವಿಂಟಲ್ ಗೂ ಹೆಚ್ಚು ತೂಕದ ಒಣ ಗಾಂಜಾವನ್ನು ವಶಕ್ಕೆ ಪಡೆದಿರುವ ಘಟನೆ ತಾಲ್ಲೂಕಿನ ಕರ್ತಿಕೆರೆ ಬಳಿ ನಡೆದಿದ್ದು, ಗಾಂಜಾ ಸಾಗಿಸುತ್ತಿದ್ದ ವಾಹನದ ಮೇಲೆ ಸಿಇಎನ್ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಮಲೆನಾಡು ಭಾಗದಲ್ಲಿ ಇಷ್ಟು ದೊಡ್ಡಮಟ್ಟದ ಕಾರ್ಯಾಚರಣೆ ನಡೆದಿದ್ದು, ಒಟ್ಟು 102 ಕೆಜಿ ಒಣ ಗಾಂಜಾ ದಾಳಿ ವೇಳೆ ಲಭ್ಯವಾಗಿದೆ.
ಸಿಇಎನ್ ಇನ್ಸ್ ಪೆಕ್ಟರ್ ರಕ್ಷಿತ್ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿ ಮಾಡಿ ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಿಗೆ ತಮ್ಮ ತಂಡದ ಮೂಲಕ ಪೂರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡವನ್ನ ಶ್ಲಾಘಿಸಿದ್ದು ನಗದು ಬಹುಮಾನವನ್ನ ನೀಡಿದ್ದಾರೆ.










