ನವದೆಹಲಿ: ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆ ಬಿಜೆಪಿ-ಕಾಂಗ್ರೆಸ್ ನಡುವೆ ಕಿಚ್ಚುಹೊತ್ತಿಸಿದೆ. ಉಭಯ ಪಕ್ಷಗಳು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಕುಸಿದುಬಿದ್ದಿದ್ದು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಪ್ರತಿಭಟನೆ ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟಿಸುತ್ತಿದ್ದ ವೇಳೆ ಪ್ರತಾಪ್ ಸಾರಂಗಿ ಅವರನ್ನು ರಾಹುಲ್ ಗಾಂಧಿ ತಳ್ಳಿದ್ದು, ಸಾರಂಗಿ ಕುಸಿದು ಬಿದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರತಿಭಟನೆ ವೇಳೆ ಗಾಯಗೊಂಡ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಿತ್ ಶಾ ಚಳಿಗಾಲದ ಅಧಿವೇಶನದಲ್ಲಿ ʻಸಂವಿಧಾನʼ ಕುರಿತ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಅಮಿತ್ ಶಾ ಅವರು ಮಾತನಾಡುತ್ತಾ, ʻಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಇದೊಂದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಅವರಿಗೆ ಸ್ವರ್ಗದಲ್ಲಿ ಸ್ಥಾನವಾದರೂ ಸಿಗುತ್ತಿತ್ತುʼ ಎಂದು ಹೇಳಿದ್ದರು. ಈ ಕುರಿತ ವೀಡಿಯೋಗಳನ್ನು ವಿಕ್ಷ ನಾಯಕರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೇಂದ್ರ ಗೃಹ ಸಚಿವರು ರಾಜೀನಾಮೇ ನೀಡಬೇಕು, ಅಂಬೇಡ್ಕರ್ ವಿರುದ್ಧದ ಟೀಕೆಗೆ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಮತ್ತೊಂದೆಡೆ ಕಾಂಗ್ರೆಸ್ ನಿಂದ ಅಂಬೇಡ್ಕರ್‍ಗೆ ಅನ್ಯಾಯವಾಗಿದೆ ಎನ್ನುವ ಪ್ಲೆ ಕಾರ್ಡ್ ಹಿಡಿದು ಬಿಜೆಪಿ ಸದಸ್ಯರು ಪ್ರತಿಭಟನೆಗಿಳಿದಿದ್ದಾರೆ. ಇತ್ತ ಬಿಜೆಪಿ ಸಂಸದರಿಂದಲೂ ಸಂಸತ್ ಆವರಣದಲ್ಲಿ ʻಕಾಂಗ್ರೆಸ್ ನಿಂದ ಅಂಬೇಡ್ಕರ್‍ಗೆ ಅನ್ಯಾಯವಾಗಿದೆʼ ಅನ್ನೋ ಪ್ಲೆ ಕಾರ್ಡ್ ಹಿಡಿದು ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆಯಲ್ಲಿ ಕರ್ನಾಟಕದ ಬಿಜೆಪಿ ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಜಗ್ಗೇಶ್ ಭಾಗಿಯಾಗಿದ್ದಾರೆ.










