ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿನ ಬಣ ಬಡಿದಾಟ ಮತ್ತೊಂದು ಹಂತಕ್ಕೆ ಹೋಗಿದ್ದು, ಕೇಸರಿ ಮನೆಯಲ್ಲಿ ಬಣ ಬಡಿದಾಟ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಇದೆ. ದಿನಕ್ಕೊಂದು ಆಂತರಿಕ ಕಚ್ಚಾಟ ಸ್ಫೋಟವಾಗುತ್ತಿದ್ದು, ಹೆಚ್ಚಾಗುತ್ತಿರುವ ವಿರೋಧಿ ಅಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಅಪ್ಪಳಿಸುತ್ತಿವೆ. ಯತ್ನಾಳ್, ರಮೇಶ್ ಜಾರಕಿಹೊಳಿ, ಶ್ರೀರಾಮುಲು ಬಳಿಕ ಇದೀಗ ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಸಿಡಿದೆದ್ದಿದ್ದಾರೆ. ಸುಧಾಕರ್ ಸಿಟ್ಟಿಗೆ ಕಾರಣವೇ ಜಿಲ್ಲಾಧ್ಯಕ್ಷರ ನೇಮಕ. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರನ್ನ ತಮ್ಮ ಗಮನಕ್ಕೆ ತರದೇ ನೇಮಕ ಮಾಡಿದ್ದಾರೆ ಎಂದು ಸುಧಾಕರ್ ಕೋಪಗೊಂಡಿದ್ದು, ಎಲ್ಲರನ್ನ ಸಮಾಧಿ ಮಾಡುವುದಕ್ಕೆ ಹೊರಟಿದ್ದೀರಾ ಎಂದು ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ಇನ್ನು ಇದಕ್ಕೆ ವಿಜಯೇಂದ್ರ ಬಣ ಸಹ ತಿರುಗೇಟು ನೀಡಿದ್ದು, ನಿಮ್ಮಂತಹವರು ಪಕ್ಷದಲ್ಲಿ ಇರುವುದಕ್ಕಿಂತ ಬಿಟ್ಟು ಹೋದರೇನೇ ಸರಿ. ಬಿಟ್ಟು ಹೋಗುವುದಾದರೆ ಹೋಗಿ ಎಂದು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಖಡಕ್ ಆಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್, ಸನ್ಮಾನ್ಯ, ಗೌರವಾನ್ವಿತ ಸಂಸದ ಡಾ. ಸುಧಾಕರ್, ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಬಹಳ ಕೇವಲವಾಗಿ ಮಾತಾಡಿದ್ದಾರೆ. ಅವರು ಮಾತಾಡಿರುವುದು ನಮಗೆ ಹಿಡಿಸಿಲ್ಲ. ಏನೇ ಇದ್ದರೂ ರಾಜ್ಯಾಧ್ಯಕ್ಷರ ಜೊತೆ ಮಾತಾಡಬಹುದಿತ್ತು. ಪರೋಕ್ಷವಾಗಿ ನನ್ನ ಕ್ಷೇತ್ರದ ಬಗ್ಗೆಯೂ ಮಾತಾಡಿದ್ದಾರೆ. ನಾನೇನು ದಡ್ಡ ಅಲ್ಲ. ಸುಧಾಕರ್ ನನ್ನಿಂದಲೇ ಸರ್ಕಾರ ರಚನೆ ಆಯಿತು ಎಂದು ಹೇಳಿದ್ದಾರೆ. 17 ಶಾಸಕರು ಬಂದಾಗ ಕೊನೆಯದಾಗಿ ಮೆಜಾರಿಟಿ ಆದ ನಂತರ ಬಂದವರು ಸುಧಾಕರ್ ಎಂದು ತಿರುಗೇಟು ನೀಡಿದರು.










