ಸಂಸಾರದ ಸಾಮರಸ್ಯಕ್ಕೆ ಗಂಡು ಹೆಣ್ಣುಗಳಿಬ್ಬರದ್ದೂ ಸಮಾನದ ಕೊಡುಗೆ ಬೇಕು…

747
firstsuddi
  •   ರಾಘವೇಂದ್ರ ಕೆಸವಳಲು      

ಸಂಸಾರದ ಸಾಮರಸ್ಯಕ್ಕೆ ಗಂಡು ಹೆಣ್ಣುಗಳಿಬ್ಬರದ್ದೂ ಸಮಾನದ ಕೊಡುಗೆ ಬೇಕು. ಆದರೆ ಸಂಸಾರ ರಸದ ರುಚಿ ಕೆಡದಂತೆ ಕಾಪಾಡುವ ಅದ್ಭುತ ಶಕ್ತಿ ಹೆಣ್ಣಿಗಿರುತ್ತದೆ. ಪ್ರತಿ ಕುಟುಂಬದಲ್ಲಿಯೂ ಆಂತರಿಕ ಭಿನ್ನಾಭಿಪ್ರಾಯಗಳು ಸಹಜ. ಗಂಡನ ಮನೆ ಸೇರುವ ಹೆಣ್ಣುನ ತಾಳ್ಮೆ ಮತ್ತು ಹೊಂದಾಣಿಕೆ ಸ್ವಭಾವದಿಂದ ಮಾತ್ರ  ಈ ಭಿನ್ನಾಭಿಪ್ರಾಯಗಳು ವಿಕೋಪಕ್ಕೆ ಹೋಗುವುದನ್ನು ತಡೆಯಬಹುದು. ಸೊಸೆ ಮಗಳಲ್ಲವೆಂಬುವುದು ನಿತ್ಯಸತ್ಯವಾದರೂ, ಒಂದು ಸೌಹಾರ್ದಯುತ ವಾತಾವರಣವನ್ನು ಹೆಣ್ಣು ತಾನು ಸೇರಿದ ಮನೆಯಲ್ಲಿ ಕ್ರಿಯೇಟ್ ಮಾಡಬಹುದು. ಅವಳಿಗೆ ಒಂದಷ್ಟು ಹೊಂದಾಣಿಕೆಯ ಗುಣವಿದ್ದು ಗಂಡನ ಮನೆಯ ಪ್ರತಿ ಆಗುಹೋಗುಗಳನ್ನು ತವರಿಗೆ ಅಪ್‍ಡೇಟ್ ಮಾಡುವ ಅಭ್ಯಾಸವಿಲ್ಲದಿದ್ದರೆ ಅರ್ಧದಷ್ಟು ಸಮಸ್ಯೆ ನಿವಾರಣೆ ಆದಂತೆಯೇ. ಏಕೆಂದರೆ ಜವಾಬ್ದಾರಿಯುತ ತಾಯಂದಿರು ಮಗಳ ಸಣ್ಣಪುಟ್ಟ ಸಮಸ್ಯೆಗಳಿಗೆ ಸೊಪ್ಪು ಹಾಕುವುದಿಲ್ಲ. ಆದರೆ ಕೆಲವರು ತಮ್ಮ ಮಗಳಿಗೆ ಚಿಕ್ಕ ನೋವಾದರೂ ಅವಳ ಅತ್ತೆ ಮನೆಯವರೆಲ್ಲರ ಮೇಲೂ ಅನಾವಶ್ಯಕ ಗೂಬೆ ಕೂರಿಸಿ ಮಗಳ ಸಂಸಾರದ ನೆಮ್ಮದಿ ಹರಣಕ್ಕೆ ಕಾರಣರಾಗುತ್ತಾರೆ. ಇನ್ನು ಸುಶಿಕ್ಷಿತ ವಲಯದ ಹೆಣ್ಣು ಮಕ್ಕಳು ತಾಳ್ಮೆ ಕೆಟ್ಟು ಮಿತಿ ಮೀರಿದ ವರ್ತನೆಗಳನ್ನು ತನ್ನ ಅತ್ತೆಯೊಂದಿಗೋ ಅಥವಾ ಇತರ ಮನೆಯ ಸದಸ್ಯರೊಂದಿಗೋ ತೋರ್ಪಡಿಸಿದರೆ, ಸಂಬಂಧಗಳು ಪ್ಯಾಚ್‍ಅಪ್ ಮಾಡಲಾರದಷ್ಟು ಹದಗೆಡುವುದಲ್ಲಿ ಸಂಶಯವೇ ಇಲ್ಲ.

  • ಮನುಷ್ಯ ಸಂಬಂಧಗಳು ಬೇಡುವುದು ಒಂದಷ್ಟು ಆದರ ಪ್ರೀತಿಯನ್ನು. ಮನಃಪೂರ್ವಕವಾಗಿ ಇದನ್ನು ಸೊಸೆಯಾದವಳು ತನ್ನವರಿಗೆ ನೀಡಿದರೆ ಖಂಡಿತಾ ಶಾಂತಿ ನೆಲೆಸುತ್ತದೆ. ಎಷ್ಟೋ ಬಾರಿ ಇಂತಹ ಕಲಹಗಳು ಗಂಡ ಹೆಂಡತಿಯರಲ್ಲಿ ವೈಮನಸ್ಸು ಏರ್ಪಡಿಸಿದರೂ ಬಲು ಬೇಗ ಈ ಗ್ಯಾಪ್ ನಿಂದ ಅವರು ಹತ್ತಿರಕ್ಕೆ ಬರುತ್ತಾರೆ. ಆದರೆ ಅತ್ತೆ, ಮಾವ, ನಾದಿನಿ ಮುಂತಾದವರ ಮನಸ್ಸುಗೆ ಒಮ್ಮೆ ಆಳವಾದ ನೋವುಂಟಾದರೆ ಮತ್ತೆ ಪ್ಯಾಚ್‍ಅಪ್ ಆಗದೆ ಉಳಿಯುವ ಸಂಭವವೇ ಹೆಚ್ಚು. ಇದು ಕುಟುಂಬ ಸದಸ್ಯರೊಂದಿಗೆ ಸಾಮರಸ್ಯದ ಮಾತಾದರೆ, ಗಂಡನೊಂದಿಗಿನ  ಬಾಂಧವ್ಯವನ್ನು ಹಲವಷ್ಟು ಬಾರಿ ಹೆಣ್ಣುಮಕ್ಕಳು ತಮ್ಮ ಅತೃಪ್ತಿಯ ಗುಣದಿಂದ ಹಾಳುಮಾಡಿಕೊಳ್ಳುತ್ತಾರೆ.
    ಮಿತಿ ಮೀರಿದ ಆಸೆ, ತೋರ್ಗಾಣಿಕೆಯ ಹಂಬಲ ಹಾಗೂ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಸ್ವಭಾವದಿಂದ ವಿನಾಕಾರಣ ಪತಿ ಪತ್ನಿಯರ ನಡುವೆ ವಿರಸ ಏರ್ಪಡುತ್ತದೆ. ತಮ್ಮಲ್ಲಿರುವುದಷ್ಟಕ್ಕೆ ತೃಪ್ತಿಪಟ್ಟು ಸಂಸಾರ ತೂಗಿಸಿದರೆ ಸ್ವರ್ಗ ಇನ್ನೆಲ್ಲೋ ಇರದೆ ಕುಟುಂಬವೇ ಸ್ವರ್ಗ ಸದೃಶವಾಗುತ್ತದೆ.
    ಭಿನ್ನ ಮನಸ್ಸಿನ, ಮುಂಗೋಪಿಯಾದ ಪತಿಯನ್ನು ಪತ್ನಿ ತನ್ನ ಕಂಟೆಂಟೆಡ್ ಮನಸ್ಥಿತಿಯಿಂದ ದಾರಿಗೆ ತಂದ ಎಷ್ಟೋ ಉದಾಹರಣೆಗಳಿವೆ. ಆದರೆ ಅನ್ಯರ ಸ್ಟೇಟಸ್‍ಗೆ ತಮ್ಮದನ್ನು ಹೋಲಿಸಿಕೊಂಡು ಕೊರಗುವ ಹಾಗೂ ಸದಾ ಗಂಡನಲ್ಲಿ ಈ ವಿಚಾರವಾಗಿ ಕಲಹ ಏರ್ಪಡಿಸಿಕೊಳ್ಳುವ ಹೆಣ್ಣುಮಕ್ಕಳು ತಾಳ್ಮೆ ಇರುವ, ಶಾಂತ ಸ್ವಭಾವದ ಗಂಡನನ್ನು ಕೂಡಾ ಒತ್ತಡಕ್ಕೆ ಸಿಲುಕಿಸಿ ಭಾವನಾತ್ಮಕವಾಗಿ ಅವನು ದೂರಾಗುವುದಕ್ಕೆ ಕಾರಣರಾಗುತ್ತಾರೆ.
    ಹೆಣ್ಣು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ತಾಂತ್ರಿಕವಾಗಿ ಇಂದು ಯಶಸ್ಸಿನ ಶಿಖರದಲ್ಲಿದ್ದಾಳೆ. ತನ್ನವರೊಂದಿಗೆ ಒಂದಷ್ಟು ಸಾಮರಸ್ಯವನ್ನು ಬೆಳೆಸಿಕೊಂಡಲ್ಲಿ ಖಂಡಿತಾ ಸಾಂಸಾರಿಕ ಉನ್ನತಿಗೆ ನಾಂದಿ ಹಾಡಬಹುದು.