ಬೆಂಗಳೂರು: ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ನಿನ್ನೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಸಂಚಾರದ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಪ್ರಮುಖ ಯೋಜನೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯ ಮೌಲ್ಯಮಾಪನ ಸಂಬಂಧ ಅವರು ಮಾತುಕತೆ ಮಾಡಿದ್ದಾರೆ. ಎಸ್‍ಟಿಆರ್‍ಆರ್ ಯೋಜನಾ ಪ್ರಸ್ತಾವನೆಯನ್ನು ಸರ್ಕಾರಿ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿಗೆ ಶೀಘ್ರದಲ್ಲೇ ಸಲ್ಲಿಸಲಾಗುವುದು. ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಗಡ್ಕರಿ ಭರವಸೆ ನೀಡಿರುವುದಾಗಿ ಕುಮಾರಸ್ವಾಮಿ ಅವರು ತಿಳಿಸಲಾಗಿದೆ. ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಆರಂಭದಲ್ಲಿ 2013 ರಲ್ಲಿ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಯೋಜನೆ ಮುಂದೂಡಲಾಗಿತ್ತು. ದೊಡ್ಡಬಳ್ಳಾಪುರ, ದೇವನಹಳ್ಳಿ, ದಾಬಸ್‍ಪೇಟೆ, ಮಾಗಡಿ, ಸೂಲಿಬೆಲೆ, ಹೊಸಕೋಟೆ, ಕನಕಪುರ, ಆನೇಕಲ್ ಮತ್ತು ರಾಮನಗರ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲಿನ ಎಂಟು ಕೈಗಾರಿಕಾ ಪಟ್ಟಣಗಳನ್ನು ಸಂಪರ್ಕಿಸುವಂತೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ವರದಿಯಾಗಿದೆ.










