ಸರ್ಕಾರಿ ನಿವಾಸದಿಂದ 90ರ ಕಲಾವಿದನನ್ನು ಹೊರಹಾಕಿದ ಕೇಂದ್ರ ಸರ್ಕಾರ…

69
firstsuddi

ನವದೆಹಲಿ : ದೆಹಲಿಯ ಏಷ್ಯನ್ ಗೇಮ್ಸ್ ಗ್ರಾಮದಲ್ಲಿರುವ ಸರ್ಕಾರಿ ನಿವಾಸಗಳಲ್ಲಿ ವಾಸವಾಗಿದ್ದ 90 ವರ್ಷ ವಯಸ್ಸಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಒಡಿಸ್ಸಿ ನೃತ್ಯಗಾರ ಗುರು ಮಾಯಾಧರ್ ರಾವುತ್ ಅವರನ್ನು ಕೇಂದ್ರ ಸರ್ಕಾರ ಹೊರಹಾಕಿದೆ.

ಇವರಂತೆಯೇ ಸರ್ಕಾರಿ ವಸತಿಗಳಲ್ಲಿ ವಾಸವಾಗಿದ್ದ ಎಂಟು ಮಂದಿ ಪ್ರಖ್ಯಾತ ಕಲಾವಿದರಿಗೆ ಮನೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದ್ದು, ಮೇ 2ರೊಳಗೆ ನಿವಾಸ ಖಾಲಿ ಮಾಡುವಂತೆ ಅವರಿಗೆ ಗಡುವು ನೀಡಲಾಗಿದೆ.

ಕಲಾವಿದರಿಗೆ ಕೆಲ ವರ್ಷಗಳ ಹಿಂದೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಮಂಜೂರಾತಿಯನ್ನು 2014ರಲ್ಲಿ ರದ್ದುಗೊಳಿಸಲಾಯಿತು. ಪರಿಣಾಮವಾಗಿ ಎಲ್ಲರೂ ವಸತಿಗಳನ್ನು ಖಾಲಿ ಮಾಡಬೇಕು ಎಂದು ನೋಟಿಸ್ ನೀಡಲಾಯಿತು.

ಹಲವು ಬಾರಿ ನೋಟಿಸ್ ಕೊಟ್ಟರೂ 28 ಕಲಾವಿದರ ಪೈಕಿ ಸುಮಾರು ಎಂಟು ಮಂದಿ ಇನ್ನೂ ತಮ್ಮ ಸರ್ಕಾರಿ ವಸತಿಗಳನ್ನು ಖಾಲಿ ಮಾಡಿಲ್ಲ. ಈ ಎಂಟು ಕಲಾವಿದರು ತಮ್ಮ ವಸತಿಗಳನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ. ಮೇ 2 ರೊಳಗೆ ನಿವಾಸ ಖಾಲಿ ಮಾಡುವುದಾಗಿ ಲಿಖಿತವಾಗಿ ಭರವಸೆ ನೀಡಿದ್ದು, ಅಲ್ಲಿಯವರೆಗೆ ಕಾಲಾವಕಾಶ ನೀಡಿದ್ದೇವೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.