ಚಿಕ್ಕಮಗಳೂರು : ಮಗಳ ಸಾವಿನ ನೋವಿನಲ್ಲೂ ಹೆತ್ತವರು ಆಕೆಯ ಒಂಬತ್ತು ಅಂಗಾಂಗಳನ್ನು ದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ.
ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಶೇಖರ್ ನಾಯ್ಕ್, ಲಕ್ಷ್ಮಿಬಾಯಿ ದಂಪತಿಯ ಪುತ್ರಿ ರಕ್ಷಿತಾ ನಗರದ ಬಸವನಹಳ್ಳಿಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ (ಕಾಮರ್ಸ್) ಓದುತ್ತಿದ್ದಳು. ಬಸ್ನಿಂದ ಇಳಿಯುವಾಗ ಬಿದ್ದು ರಕ್ಷಿತಾ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಹಾಗೂ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದು ವೈದ್ಯರು ಉಳಿಯಲು ಸಾಧ್ಯವೇ ಇಲ್ಲ ಎಂದಾಗ ಹೆತ್ತವರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಅದರಂತೆ 9 ಜನರಿಗೆ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ರಕ್ಷಿತಾ ಅಗಲಿಕೆಯ ನೋವಿನ ನಡುವೆಯೂ ಕುಟುಂಬಸ್ಥರು ತೆಗೆದುಕೊಂಡ ಈ ನಿರ್ಧಾರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ರಕ್ಷಿತಾ ಅವರ ಹೃದಯವನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ. ರಕ್ಷಿತಾ ಅವರ ಕಣ್ಣು, ಕಿಡ್ನಿಯನ್ನು ಮಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ರವಾನಿಸಲಾಗಿದೆ. ರಕ್ಷಿತಾ ಅವರ ಲಿವರ್ ಅನ್ನು ಉಡುಪಿಗೆ ಕಳಿಸಲಾಗಿದೆ. ರಕ್ಷಿತಾ ಅವರ ಹೃದಯವನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿರುವ 12 ವರ್ಷದ ಬಾಲಕಿಗೆ ಕಸಿ ಮಾಡಲಾಗಿದೆ. ದಾರಿಯುದ್ಧಕ್ಕೂ ಜನ ಕೂಡ ರಕ್ಷಿತಾಳ ಆತ್ಮಕ್ಕೆ ಶಾಂತಿ ಕೋರಿ ಮತ್ತೊಂದು ಜೀವ ಉಳಿಯಲು ಶುಭಹಾರೈಸಿದರು. ಅಂಗಾಂಗ ಕಸಿ ಬಳಿಕ ರಕ್ಷಿತಾ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಡೂರಿನ ಸೋಮನಹಳ್ಳಿ ತಾಂಡಾಗೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಯ್ತು.










