ಬೆಳಗಾವಿ: ತುಮಕೂರು ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಪಾವತಿಸುವಂತೆ ಕೆಐಎಡಿಬಿ ನೀಡಿದ ನೋಟೀಸ್ ಅನ್ನು ಹಿಂಪಡೆಯಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ”ಸಿದ್ದಗಂಗಾ ಮಠದ ಬಳಿ ಕೆಐಎಡಿಬಿಗೆ ಸೇರಿದ ಕೆರೆ ಇದ್ದು, ಆ ಕೆರೆಯಿಂದ ನೀರನ್ನು ಮಠದವರು ತೆಗೆದುಕೊಂಡಿದ್ದರು. ಅದಕ್ಕೆ ಬಿಲ್ ಕೊಡುವಂತೆ ನೋಟಿಸ್ ನೀಡಲಾಗಿತ್ತು. ಸಿದ್ದಗಂಗಾ ಮಠವು ವಿಶ್ವಕ್ಕೆ ಮಾದರಿಯಾದ ಮಠ. ಹತ್ತು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಬಸವಣ್ಣರ ತತ್ವದ ಅಡಿ ದಾಸೋಹ ಮಾಡುತ್ತಿರುವ ಮಠ ಅದಾಗಿದೆ. ಮಠವು ನೀರು ಪಡೆದುಕೊಂಡರೂ ತಪ್ಪಲ್ಲ. ಇಲಾಖೆಯ ಮುಖ್ಯ ಅಭಿಯಂತರರು ಮಠದ ಜೊತೆ ಮಾತನಾಡಿದ್ದಾರೆ” ಎಂದು ತಿಳಿಸಿದರು. ಈ ಸಂಬಂಧ 70.31 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ. ವಿದ್ಯುತ್ ಬಿಲ್ ಗಳನ್ವಯ ಹಣವನ್ನು ಬೆಸ್ಕಾಂಗೆ ಪಾವತಿಸಲು ಅನುಮೋದನೆ ಕೋರಿ ಕೆಐಎಡಿಬಿಗೆ 25.03.2024ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ವತಿಯಿಂದ ನೀರು ಸರಬರಾಜು ಮಾಡಲಾಗಿದ್ದು, ನೀರನ್ನು ಸಿದ್ಧಗಂಗಾ ಮಠಕ್ಕೆ ದೈನಂದಿನ ಚಟುವಟಿಕೆಗಳಿಗೆ ಉಪಯೋಗಿಸಲಾಗಿದೆ. ಪ್ರಸ್ತುತ ಮಂಡಳಿಯ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ನೀರು ಸರಬರಾಜಿನ ವಿದ್ಯುತ್ ಬಳಕೆಯ ವೆಚ್ಚವನ್ನು ಶ್ರೀಸಿದ್ದಗಂಗಾ ಮಠದ ವತಿಯಿಂದ ಭರಿಸುವಂತೆ ನೋಟಿಸ್ ನೀಡಲಾಗಿತ್ತು.










