ಸ್ಯಾಂಡಲ್‍ವುಡ್ ಡ್ರಗ್ಸ್ ನಂಟು: ಸಿನಿಮಾ ವಿತರಕ ಪ್ರಶಾಂತ್ ಸಂಬರಗಿ ವಿರುದ್ಧ ಎಫ್‍ಐಆರ್ ದಾಖಲು…

247
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹಮ್ಮದ್ ಅವರ ಮೇಲೆ ಆರೋಪ ಮಾಡಿದ್ದ ಸಿನಿಮಾ ವಿತರಕ ಪ್ರಶಾಂತ್ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹಮ್ಮದ್ ಅವರು ನೀಡಿದ ದೂರಿನ ಅನ್ವಯ ಪ್ರಶಾಂತ್ ಸಂಬರಗಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ದೂರು ದಾಖಲಿಸಿರುವ ಬಗ್ಗೆ ಸ್ವತಃ ಶಾಸಕರೇ ತಮ್ಮ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಡ್ರಗ್ಸ್ ನಂಟಿಗೆ ಸಂಬಂಧಿಸಿದಂತೆ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದ್ದು. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವ ಬಸವರಾಜು ಬೊಮ್ಮಾಯಿ ಅವರಲ್ಲಿ ಒತ್ತಾಯಿಸುತ್ತೇನೆ.

ಪ್ರಶಾಂತ್ ಸಂಬರಗಿ ಎಂಬಾತನ ಸುಳ್ಳು ಆರೋಪಗಳ ಬಗ್ಗೆ ಬೆಂಗಳೂರಿನ 24ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದೇನೆ. ದೂರಿನಂತೆ ಐಪಿಸಿ ಸೆಕ್ಷನ್ 120(B), 504, 463, 465, 506 ಸೆಕ್ಷನ್ ಗಳ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆಗೆ ಚಾಮರಾಜಪೇಟೆ ಠಾಣೆಯ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ.

ಜೂನ್ 08, 2019 ರಂದು ನಾನು ಸಂಜನಾ ಅವರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದೆ ಎಂದು ಆರೋಪಿಸಲಾಗಿದೆ. ಹಾಗಿದ್ದಲ್ಲಿ ವಿಮಾನ ಪ್ರಯಾಣದ ಟಿಕೆಟ್ ಗಳಿರಬೇಕಲ್ಲಾ? ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರೆ ಅಲ್ಲಿಯೂ ದಾಖಲೆಗಳಿಬೇಕಲ್ಲಾ? ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ನನ್ನ ಓಡಾಟದ ಚಿತ್ರಗಳೂ ಇರಬೇಕಲ್ವಾ? ಈ ಬಗ್ಗೆಯೂ ತನಿಖೆ ನಡೆಯಲಿ.

ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ನಾನೇನೋ ಪ್ರಭಾವ ಬೀರುತ್ತಿದ್ದೆ ಎಂದು ಹೇಳಬಹುದಿತ್ತು. ಈಗ ನಟಿ ಸಂಜನಾ ಪೊಲೀಸರ ವಶದಲ್ಲಿದ್ದಾರೆ. ಆದ್ದರಿಂದ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳಲಿ. ಅದೇ ರೀತಿ ಶ್ರೀಲಂಕಾ ಪ್ರವಾಸದ ಬಗ್ಗೆಯೂ ತನಿಖೆ ನಡೆಸಲಿ.

ಪೊಲೀಸರು ನಡೆಸುವ ತನಿಖೆಯಲ್ಲಿ ಸಂಬರಗಿ ಮಾಡಿರುವ ಆರೋಪಗಳು ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡಲು ಸಿದ್ಧನಿದ್ದೇನೆ. ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಕಂಡುಬಂದರೆ ಆರೋಪಿಗಳನ್ನು ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಿ.

ನಾನು ರಾಜಕೀಯದಲ್ಲಿರುವ ವ್ಯಕ್ತಿ, ಸುಳ್ಳು ಆರೋಪಗಳು, ಚಾರಿತ್ರ್ಯ ಹನನದ ಪ್ರಯತ್ನಗಳು ನನಗೆ ಹೊಸತೇನಲ್ಲ. ಅವೆಲ್ಲವನ್ನು ಜನಾಶೀರ್ವಾದದ ಬಲದಿಂದ ಎದುರಿಸುತ್ತಾ ಬಂದಿದ್ದೇನೆ. ನಾನು ಏನೆನ್ನುವುದು ನಾನು ನಂಬಿರುವ ಜನ ಮತ್ತು ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ಎಂದು ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.