ಸಿಲಿಕಾನ್ ಸಿಟಿಯಲ್ಲಿ ಮಳೆ ಅವಾಂತರ : ಥಿಯೇಟರ್ ಗೋಡೆ ಕುಸಿದು ಬೈಕ್‍ಗಳು ಜಖಂ, ರಾಜಕಾಲುವೆಯಲ್ಲಿ ಕೊಚ್ಚಿಹೋದ ಯುವಕ.

79
firstsuddi

ಬೆಂಗಳೂರು : ತಡರಾತ್ರಿ ನಗರದಲ್ಲಿ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. ಭಾರೀ ಮಳೆಗೆ ಕೆ.ಆರ್ ಪುರಂನ ದೇವಸಂದ್ರದಲ್ಲಿರುವ ಕೃಷ್ಣ ಥಿಯೇಟರ್ ಗೋಡೆ ಕುಸಿದು 24 ಬೈಕ್ ಗಳು ಜಖಂ ಗೊಂಡಿದ್ದರೆ, 24 ವರ್ಷದ ಮಿಥುನ್ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅಭಿನಯದ `777 ಚಾರ್ಲಿ’ ಸಿನಿಮಾ ಸೆಕೆಂಡ್ ಶೋ ನೋಡಲು ಜನರು ಬಂದಿದ್ದರು. ಈ ವೇಳೆ ತಮ್ಮ ಬೈಕ್ ಗಳನ್ನು ಕಾಂಪೌಂಡ್ ಬಳಿ ಪಾರ್ಕ್ ಮಾಡಿದ್ದರು. 11 ಗಂಟೆ ಸುಮಾರಿಗೆ ಬೈಕ್ ಗಳ ಮೇಲೆ ಗೋಡೆ ಕುಸಿದು ಬಿದ್ದಿದೆ. ಮಾಲೀಕರು ಥಿಯೇಟರ್ ಸರಿಯಾಗಿ ನಿರ್ವಹಣೆ ಮಾಡದೇ ಇದ್ದಿದ್ದರಿಂದ ಘಟನೆ ಜರುಗಿದೆ ಎಂದು ಗಾಡಿ ಕಳೆದುಕೊಂಡ ಮಾಲೀಕರು, ಥಿಯೇಟರ್ನವರ ಜೊತೆ ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದರು.

ಭಾರೀ ಮಳೆ ಸುರಿದ ಕಾರಣ ರಾತ್ರಿ 12ರ ಸುಮಾರಿಗೆ ಕೆ ಆರ್ ಪುರದ ಗಾಯತ್ರಿ ಬಡಾವಣೆ ನೀರಿನಿಂದ ಆವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದು, ಆತನ ಬೈಕ್ ನೀರಲ್ಲಿ ಕೊಚ್ಚಿ ಹೋಗುತ್ತಿತ್ತು. ಆಗ ಬೈಕ್ ರಕ್ಷಿಸಲು ಮುಂದಾದ ಯುವಕ ಕೂಡ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ, ಎನ್ ಡಿಆರ್ ಎಪ್ ಸಿಬ್ಬಂದಿಯು ಕೊಚ್ಚಿ ಹೋದ ಯುವಕನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಇನ್ನೂ ನಗರದ ಕಾವೇರಿ ನಗರದಲ್ಲಿ ಗೋಡೆ ಕುಸಿದು 55 ವರ್ಷದ ಮನಿಯಮ್ಮ ಮೃತಪಟ್ಟಿದ್ದಾರೆ. ಗೋಡೆ ಬಿದ್ದ ಪರಿಣಾಮ ಉಳಿದ ಮನೆಯಲ್ಲಿದ್ದ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳು ಆಗಿವೆ. ಮರಣೋತ್ತರ ಪರೀಕ್ಷೆಗೆ ಮೃತ ಮುನಿಯಮ್ಮ ಮೃತದೇಹ ವೈದೇಹಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಗೊಂಡಿರುವ ಮನೆಯ ಉಳಿದ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಮಹದೇವಪುರ ವಲಯ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಚಲಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.