ಸೇನಾ ದಿನಾಚರಣೆ – ಶುಭ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್.

56
firstsuddi

ನವದೆಹಲಿ : ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನವನ್ನು ಆಚರಿಸಲಾಗುತ್ತಿದ್ದು, ವೀರ ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

‘ಸೇನಾ ದಿನದ ಶುಭ ಸಂದರ್ಭದಲ್ಲಿ ನಮ್ಮ ಧೈರ್ಯಶಾಲಿ ಹಾಗೂ ಗೌರವಾನ್ವಿತ ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ಶುಭಾಶಯ ತಿಳಿಸುತ್ತೇನೆ. ಭಾರತೀಯ ಸೇನೆಯು ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ರಾಷ್ಟ್ರೀಯತೆಗೆ ಭಾರತೀಯ ಸೇನೆ ಅಮೂಲ್ಯವಾದ ಕೊಡುಗೆ ನೀಡಿದ್ದು, ಅದನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿ, ‘ರಾಷ್ಟ್ರೀಯ ಭದ್ರತೆ ಒದಗಿಸುವಲ್ಲಿ ಭಾರತೀಯ ಸೇನೆ ಪ್ರಮುಖ ಪಾತ್ರ ವಹಿಸಿದೆ. ಗಡಿ ರಕ್ಷಣೆ ಮತ್ತು ಶಾಂತಿ ಕಾಪಾಡುವಲ್ಲಿ ನಮ್ಮ ಸೈನಿಕರು ವೃತ್ತಿಪರತೆ, ತ್ಯಾಗ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ. ನಿಮ್ಮ ಸೇವೆಗೆ ರಾಷ್ಟ್ರವು ಆಭಾರಿಯಾಗಿದೆ. ಯೋಧರಿಗೆ ಸೇನಾ ದಿನದ ಶುಭಾಶಯಗಳು’ ಎಂದು ತಿಳಿಸಿದ್ದಾರೆ.

ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಮೂರು ಪಡೆಗಳ ಮುಖ್ಯಸ್ಥರು ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ಗೌರವ ಸಲ್ಲಿಸಿದರು. ಜನರಲ್ ಮನೋಜ್ ಮುಕುಂದ್ ನರವಾಣೆ, ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹಾಗೂ ಅಡ್ಮಿರ್ಲ್ ಆರ್ ಹರಿ ಕುಮಾರ್ ಈ ಸಮಾರಂಭದಲ್ಲಿ ಪಾಲ್ಗೊಂಡರು.