ಸ್ನೇಹಿತನೊಂದಿಗೆ ಸೇರಿ ಪ್ರಿಯತಮೆಯ ಮೇಲೆ ಅತ್ಯಾಚಾರ ಮಾಡಿದ ಪ್ರಿಯಕರ!

51
firstsuddi

ಬೆಂಗಳೂರು: ಸ್ನೇಹಿತನೊಂದಿಗೆ ಸೇರಿ ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಅತ್ಯಾಚಾರ ಮಾಡಿದ ಘಟನೆಯೊಂದು ನಗರದಲ್ಲಿ ನಡೆದಿದೆ.

ಪುರುಷೋತ್ತಮ್ ಹಾಗೂ ಚೇತನ್ ಆರೋಪಿಗಳು. ಮೂಲತಃ ತುಮಕೂರಿನ ನಿವಾಸಿಯಾಗಿರುವ ಯುವತಿ, ಪ್ಯಾರಾ ಮೆಡಿಕಲ್ ಓದುತ್ತಿದ್ದಳು. ಯುವತಿ ಹಾಗೂ ತುಮಕೂರಿನ ಕೊರಟಗೆರೆ ನಿವಾಸಿ ಪುರುಷೋತ್ತಮ್ ಕಳೆದ ಒಂದು ವರ್ಷದಿಂದ ಪರಸ್ಪರ ಪೀತಿಸುತ್ತಿದ್ದರು.

ಕಳೆದ ಒಂದು ವಾರದ ಹಿಂದೆ ಯುವತಿಯನ್ನ ಭೇಟಿ ಮಾಡಿದ್ದ ಆರೋಪಿ ಪುರುಷೋತ್ತಮ್, ನಂತರ ಯುವತಿಯ ಮೊಬೈಲ್ ಪಡೆದು ಬೆಂಗಳೂರಿಗೆ ಬಂದಿದ್ದ. ಎರಡು ದಿನಗಳ ಹಿಂದೆ ಪ್ರಿಯಕರನಿಗೆ ಕರೆ ಮಾಡಿ ನನ್ನ ಮೊಬೈಲ್ ವಾಪಸ್ ಕೊಡು ಅಂತ ಯುವತಿ ಕೇಳಿದ್ದಳು. ಈ ವೇಳೆ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಾ, ನಿನ್ನ ಮೊಬೈಲ್ ಕೊಡ್ತೀನಿ ಎಂದು ಪುರುಷೋತ್ತಮ್ ಹೇಳಿದ್ದಾನೆ. ಹೀಗಾಗಿ ಜೂ.6 ರಂದು ಯುವತಿ ನಗರದ ಮೆಜೆಸ್ಟಿಕ್ ಗೆ ಬಂದಿದ್ದಳು. ಈ ವೇಳೆ ಮೊಬೈಲ್ ರೂಮ್‌ನಲ್ಲಿದೆ ಎಂದು ಹೇಳಿ ಯುವತಿಯನ್ನ ಪುಸಲಾಯಿಸಿ ಗಿರಿನಗರದ ಈರಣ್ಣಗುಡ್ಡೆಯ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದ್ದಾನೆ.

ಇನ್ನು ರೂಮಿಗೆ ಬಂದ ಯುವತಿ ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕು ಎಂದು ಕೇಳಿದ್ದಾಳೆ. ಆದರೂ ಮೊಬೈಲ್ ಕೊಡದ ಪ್ರಿಯಕರ ಇವತ್ತು ಇಲ್ಲೆ ಇರು ಅಂತ ಹೇಳಿದ್ದಾನೆ. ಇಲ್ಲ ನಾನು ಇರೋದಿಲ್ಲ ಮನೆಗೆ ಹೋಗಬೇಕು ಎಂದು ಹಠ ಮಾಡಿದ್ದ ಯುವತಿಯ ಮೇಲೆ ಪ್ರಿಯಕರ ಬಲವಂತವಾಗಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿದ್ದಾನೆ. ನಂತರ ತನ್ನ ಸ್ನೇಹಿತ ಚೇತನ್‍ನ ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಪುರುಷೋತ್ತಮ್ ಹಾಗೂ ಆತನ ಗೆಳೆಯ ಚೇತನ್ ಇಬ್ಬರೂ ಸೇರಿ ಯುವತಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. 

ಯುವತಿಯ ಚೀರಾಟವನ್ನು ಕೇಳಿದ ಅಕ್ಕಪಕ್ಕದ ಮೆನೆಯವರು ಹುಡುಗರ ರೂಮಿನತ್ತ ಬಂದಿದ್ದಾರೆ. ಯುವಕರಿಂದ ಅತ್ಯಾಚಾರ ಯತ್ನಕ್ಕೆ ಒಳಗಾಗುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿ ಕೂಡಲೇ ಗಿರಿನಗರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸದ್ಯ ಯುವತಿಯನ್ನ ರಕ್ಷಣೆ ಮಾಡಿದ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಪೋಷಕರ ಬಳಿ ಬಿಟ್ಟಿದ್ದಾರೆ. ಇನ್ನು ಆರೋಪಿಗಳಾದ ಚೇತನ್ ಹಾಗು ಪುರುಷೋತ್ತಮ್ ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.