ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಲಕಿ ಸಾವು ಪ್ರಕರಣ- ಅಪಾರ್ಟ್‌ಮೆಂಟ್‌ ಅಸೋಸಿಯೇಷನ್ ಅಧ್ಯಕ್ಷ ಸೇರಿ 7 ಜನರ ಬಂಧನ…

48
firstsuddi

ಬೆಂಗಳೂರು: ನಗರದ ಹೊರವಲಯ ವರ್ತೂರಿನ ಖಾಸಗಿ ಅಪಾರ್ಟ್‌ಮೆಂಟ್‌ನ ಸ್ವಿಮ್ಮಿಂಗ್‌ಪೂಲ್‌ಗೆ ಬಿದ್ದು ಬಾಲಕಿ ಮಾನ್ಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ತಿಂಗಳ ಬಳಿಕ ರೋಚಕ ಟ್ವಿಸ್ಟ್ ಸಿಕ್ಕಿದೆ. ಬಾಲಕಿ ಸಾವಿಗೆ ಕಾರಣವಾದ 7 ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮೃತ ಮಾನ್ಯ ತಂದೆ ರಾಜೇಶ್ ದೂರು ಆಧರಿಸಿ, ಎಲೆಕ್ಟ್ರಿಕಲ್ ವಿಂಗ್ ಟೀಂ, ಸ್ವಿಮ್ಮಿಂಗ್ ಪೂಲ್ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಐಪಿಸಿ ಸೆಕ್ಷನ್ 304ರಡಿ ಪ್ರಕರಣ ದಾಖಲಿಸಿ ವರ್ತೂರು ಪೊಲೀಸರು ಬಂಧಿಸಿದ್ದಾರೆ.

ಪ್ರೆಸ್ಟೀಜ್ ಹೋಮ್ ಓನರ್ ಅಸೋಸಿಯೇಷನ್ ಅಧ್ಯಕ್ಷ ದಬಾಶಿಶ್ವಸಿನ್ಹಾ, ಸಿಬ್ಬಂದಿಯಾದ ಜಾವೇದ್ ಸಫೀಕ್, ಸಂತೋಷ್ ಮಹಾರಾಣಾ, ಬಿಕಾಸ್ ಕುಮಾರ್, ಭಕ್ತ ಚರಣ್ ಪ್ರಧಾನ್, ಸುರೇಶ್, ಗೋವಿಂದ್ ಮಂಡಲ್ ಬಂಧಿತರು.

ವರ್ತೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಆಟವಾಡುವಾಗ ಬಾಲಕಿಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಬಾಲಕಿಯನ್ನು ನಂತರ ಅಪಾರ್ಟ್‌ಮೆಂಟ್‌ನ ಈಜುಕೊಳಕ್ಕೆ ಬೀಸಾಡಿ ಆಕಸ್ಮಿಕ ಸಾವು ಎಂಬಂತೆ ಬಿಂಬಿಸಿದ್ದರು ಎಂಬ ಅನುಮಾನ ವ್ಯಕ್ತವಾಗಿತ್ತು. ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಬೆಸ್ಕಾಂ ಅಧಿಕಾರಿಗಳು ಕೂಡ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದರು.ಈ ವೇಳೆ ಮೃತ ಬಾಲಕಿ ತಂದೆ ಅಪಾರ್ಟ್‌ಮೆಂಟ್‌ ಒಳಗಿನ ಸ್ವಿಮ್ಮಿಂಗ್ ಫೂಲ್ ಬಳಿ ವಿದ್ಯುತ್ ತಂತಿ ತಗುಲಿ ಬಾಲಕಿ ಸಾವನ್ನಪ್ಪಿದ ಆರೋಪ ಮಾಡಿದ್ದರು. ನಂತರ, ಮೃತ ಬಾಲಕಿ ಮಾನ್ಯಳ ಶವಪರೀಕ್ಷೆ ವರದಿಗೆ ಶವವನ್ನು ಕಳುಹಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಪಟ್ಟವರಿಗೆ ನೋಟಿಸ್ ಕೊಡಲಿಕ್ಕೆ ಪೊಲೀಸರು ಸಿದ್ದತೆ ಮಾಡಿಕೊಂಡಿದ್ದರು.

ಇನ್ನು ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ಬಾಲಕಿ ಸಾವಿನ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಬಾಲಕಿ ಮಾನ್ಯ ಮೃತಪಟ್ಟ ಒಂದೂವರೆ ತಿಂಗಳಾದರೂ ಅಪಾರ್ಟ್‌ಮೆಂಟ್‌ನ ಎಲೆಕ್ಟ್ರಿಕಲ್ ರಿಪೋರ್ಟ್ ಹಾಗೂ ಎಫ್ಎಸ್ಎಲ್ ವರದಿ ಬಂದಿಲ್ಲ. ಅಂದರೆ ಅಪಾರ್ಟ್‌ಮೆಂಟ್‌ನಲ್ಲಿ ಬಾಲಕಿಯ ಸಾವು ಅಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಗಿದ್ದರೂ, ಅದನ್ನು ಆಕಸ್ಮಿಕ ಸಾವೆಂದು ಮುಚ್ಚಿಹಾಕಲು ಯತ್ನ ನಡೆದಿದೆ ಎಂಬ ಅನುಮಾನ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮೃತ ಬಾಲಕಿಯ ತಂದೆಯ ದೂರನ್ನು ಆಧರಿಸಿ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್ ಅಧ್ಯಕ್ಷ ಸೇರಿ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.