ಹಂದಿ ಹೃದಯ ಕಸಿಗೊಳಗಾಗಿದ್ದ ಅಮೆರಿಕದ ವ್ಯಕ್ತಿ 40 ದಿನಗಳ ಬಳಿಕ ಸಾವು…

41
firstsuddi

ವಾಷಿಂಗ್ಟನ್: ಹಂದಿಯ ಹೃದಯ ಕಸಿ ಪಡೆದ ವ್ಯಕ್ತಿಯೊಬ್ಬರು ಶಸ್ತ್ರಚಿಕಿತ್ಸೆಯ 40 ದಿನಗಳ ನಂತರ ಸಾವಿಗೀಡಾಗಿದ್ದಾರೆ. ಇವರು ವಿಶ್ವದಲ್ಲೇ ಹಂದಿ ಹೃದಯ ಕಸಿಗೊಳಗಾಗಿದ್ದ 2ನೇ ವ್ಯಕ್ತಿಯಾಗಿದ್ದರು.

58 ವರ್ಷದ ಲಾರೆನ್ಸ್ ಫೌಸೆಟ್ ಮೃತವ್ಯಕ್ತಿ. ಸೆಪ್ಟೆಂಬರ್ 20 ರಂದು ಹೃದಯಾಘಾತದಿಂದ ಸಾಯುವ ಹಂತಕ್ಕೆ ತಲುಪಿದ್ದ ಫೌಸೆಟ್‌ಗೆ ಕೊನೆಯ ಆಯ್ಕೆಯಾಗಿ ಹಂದಿಯ ಹೃದಯವನ್ನು ಕಸಿ ಮಾಡಲಾಗಿತ್ತು.

ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪ್ರಕಾರ, ಫೌಸೆಟ್‌ಗೆ ಹೃದಯ ಕಸಿ ಮಾಡಿದ ಬಳಿಕ 1 ತಿಂಗಳು ಆರೋಗ್ಯವಾಗಿದ್ದರು. ಆದರೆ ನಂತರದ ದಿನಗಳಲ್ಲಿ ಹೃದಯ ಸರಿಯಾಗಿ ಸ್ಪಂದಿಸದ ಲಕ್ಷಣಗಳು ತೋರಿಸಲಾರಂಭಿಸಿದೆ. ಶಸ್ತ್ರಚಿಕಿತ್ಸೆಯ ನಂತರ ಅವರು ಸುಮಾರು 6 ವಾರಗಳ ಕಾಲ ಬದುಕಿದ್ದರು. ಫೌಸೆಟ್ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಫೌಸೆಟ್ ತನ್ನ ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿತ್ತು. ಅವರು ಎದ್ದು ಕುಳಿತುಕೊಳ್ಳುತ್ತಿದ್ದರು. ಆರಾಮಾಗಿ ಓಡಾಡುತ್ತಿದ್ದರು ಮಾತ್ರವಲ್ಲದೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದರು. ಅವರಿಗೆ ಮಾಡಲಾಗಿದ್ದ ಶಸ್ತ್ರಚಿಕಿತ್ಸೆಯೇನೋ ಯಶಸ್ವಿಯಾಗಿತ್ತು. ಆದರೆ ಬಳಿಕ ಮನುಷ್ಯನ ದೇಹಕ್ಕೆ ಹಂದಿಯ ಹೃದಯ ಹೊಂದಿಕೊಳ್ಳುವುದು ಕಷ್ಟವಾಗತೊಡಗಿತು. ವೈದ್ಯಕೀಯ ತಂಡದ ಸತತ ಪ್ರಯತ್ನಗಳ ಹೊರತಾಗಿಯೂ, ಫೌಸೆಟ್ ಅಂತಿಮವಾಗಿ ಅಕ್ಟೋಬರ್ 30 ರಂದು ಸಾವನ್ನಪ್ಪಿದರು ಎಂದು ಆಸ್ಪತ್ರೆ ತಿಳಿಸಿದೆ.

ಫೌಸೆಟ್ ಅವರು ನೌಕಾಪಡೆಯಲ್ಲಿ ಕೆಲಸ ಮಾಡಿ ನಂತರ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ಲ್ಯಾಬ್ ತಂತ್ರಜ್ಞರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಈ ಬಗ್ಗೆ ಮಾತನಾಡಿರುವ ಫೌಸೆಟ್ ಅವರ ಪತ್ನಿ ಆನ್, ಅವರು ನಮ್ಮೊಂದಿಗೆ ಕಳೆಯಲು ಇದ್ದ ಸಮಯ ಕಡಿಮೆಯಿತ್ತು ಎಂಬುದನ್ನು ತಿಳಿದಿದ್ದರು. ಅವರು ನಮ್ಮೊಂದಿಗಿರಲು ಇದು ಕೊನೆಯ ಅವಕಾಶವಾಗಿತ್ತು. ಅವರು ಇಷ್ಟು ದಿನ ಬದುಕಿ ಉಳಿಯುತ್ತಾರೆ ಎಂದು ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಮೇರಿಲ್ಯಾಂಡ್ ತಂಡ ವಿಶ್ವದಲ್ಲೇ ಮೊದಲ ಬಾರಿಗೆ ಡೇವಿಡ್ ಬೆನೆಟ್ ಎಂಬವರಿಗೆ ಹಂದಿಯ ಹೃದಯವನ್ನು ಕಸಿ ಮಾಡಿತ್ತು. ಆದರೆ ಕಸಿ ಮಾಡಿದ 2 ತಿಂಗಳ ನಂತರ ಅವರು ನಿಧನರಾದರು. 57 ವರ್ಷದ ಬೆನೆಟ್ 2022ರ ಜನವರಿ 7 ರಂದು ಕಸಿ ಮಾಡಿಸಿಕೊಂಡಿದ್ದರು. ನಂತರ ಅದೇ ವರ್ಷ ಮಾರ್ಚ್ 8 ರಂದು ಸಾವನ್ನಪ್ಪಿದರು.