ಬೆಂಗಳೂರು: ಬೊಮ್ಮನಹಳ್ಳಿ ಸಮೀಪದ ಕೂಡ್ಲುಗೇಟ್ನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸತತ ಮೂರು ದಿನ ಕಾರ್ಯಾಚರಣೆ ನಂತರ ಇಂದು ಸೆರೆಹಿಡಿದಿದ್ದಾರೆ. ಆದರೆ ಸೆರೆ ಸಿಕ್ಕ ಚಿರತೆ ಇದೀಗ ಸಾವನ್ನಪ್ಪಿದೆ ಎನ್ನಲಾಗುತ್ತಿದೆ.
ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಹಿನ್ನೆಲೆ ಚಿರತೆಯನ್ನು ಸೆರೆ ಹಿಡಿದ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಚಿರತೆ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ.
ಚಿರತೆಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಗಿತ್ತು. ಅರವಳಿಕೆ ಮದ್ದು ನೀಡಿದ ನಂತರವೂ ಅರೆಪ್ರಜ್ಞಾವಸ್ಥೆಯಲ್ಲಿದ್ದ ಚಿರತೆ ಪಶುವೈದ್ಯರ ಮೇಲೂ ದಾಳಿ ನಡೆಸಿತ್ತು. ಕೊನೆಗೂ ಹರಸಾಹಸಪಟ್ಟು ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಅರವಳಿಕೆ ತಜ್ಞ ಕಿರಣ್ ಅವರನ್ನು ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದರು. ನಂತರ ಲೆಪರ್ಡ್ಸ್ ಟಾಸ್ಕ್ಫೋರ್ಸ್ ವಾಹನಕ್ಕೆ ಚಿರತೆಯನ್ನು ಶಿಫ್ಟ್ ಮಾಡಿ ಕರೆದೊಯ್ಯಲಾಯಿತು.










