ನವದೆಹಲಿ: ದೇಶದಲ್ಲಿ ಸಂಭವಿಸುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್-19 ವ್ಯಾಕ್ಸಿನೇಷನ್ ಕಾರಣವಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
“ಹಿಂದೆ ಕುಟುಂಬಗಳಲ್ಲಿ ಕೋವಿಡ್-19 ನಿಂದ ಆಸ್ಪತ್ರೆಗೆ ದಾಖಲಾದ ಪ್ರಕರಣಗಳು, ಹಠಾತ್ ಸಾವಿನ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳವಿತ್ತು. ಇದಕ್ಕೆ ಕುಟುಂಬದಲ್ಲಿ ವಂಶಪಾರಂಪರಿಕವಾಗಿ ಬಂದಿರುವ ಆರೋಗ್ಯ ಸಮಸ್ಯೆಗಳು ಹಾಗು ಇಂದಿನ ಬದಲಾದ ಜೀವನಶೈಲಿ (ಅತಿಯಾದ ಮದ್ಯಪಾನ ಮತ್ತು ತೀವ್ರ ದೈಹಿಕ ಚಟುವಟಿಕೆಯಂತಹ ಜೀವನಶೈಲಿ)ಯ ಅಂಶಗಳಿಂದ ಹಠಾತ್ ಸಾವಿನ ಅಪಾಯ ಹೆಚ್ಚಾಗಿದೆ ಎಂಬುದು ತಿಳಿದು ಬಂದಿದೆ. ಆದರೆ ವ್ಯಾಕ್ಸಿನೇಷನ್ ಕೊರೊನಾ ಸೋಂಕಿನ ಅಪಾಯ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಕೋವಿಡ್-19 ಲಸಿಕೆಯು ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ” ಎಂದು ಐಸಿಎಂಆರ್ ಅಧ್ಯಯನ ಸ್ಪಷ್ಟಪಡಿಸಿದೆ.
ಕೋವಿಡ್ ಲಸಿಕೆ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಈ ಅಧ್ಯಯನ ಕೈಗೊಂಡಿದ್ದಾರೆ. “ಭಾರತದಲ್ಲಿ 18-45 ವರ್ಷ ವಯಸ್ಸಿನ ವಯಸ್ಕರಲ್ಲಿ ಹಠಾತ್ ಮರಣಕ್ಕೆ ಸಂಬಂಧಿಸಿದ ಅಂಶಗಳು” ಎಂಬ ಶೀರ್ಷಿಕೆಯ ಅಧ್ಯಯನವು, ವ್ಯಾಕ್ಸಿನೇಷನ್ ಯಾವುದೇ ರೀತಿಯಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂಬುದನ್ನು ಕಂಡು ಹಿಡಿದಿದೆ.










