ಮೂಡಿಗೆರೆ : ಹದಿಹರೆಯದ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿಕೊಳ್ಳುವುದರ ಮೂಲಕ ಎಂತಹ ಕ್ಲಿಷ್ಟಕರ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಆದರೆ ನಾಚಿಕೆಯಿಂದ ಮುಚ್ಚಿಟ್ಟುಕೊಂಡರೆ ಪರಿಹಾರಕ್ಕಿಂತ ಸಮಸ್ಯೆಯೇ ಹೆಚ್ಚು ಎಂದು ವೈದ್ಯೆ ಡಾ.ಮೇಘಾ ಅವರು ಅಭಿಪ್ರಾಯಪಟ್ಟರು.
ಮೂಡಿಗೆರೆ ಜೆಸಿಐ ಸಂಸ್ಥೆ ವತಿಯಿಂದ ಮಹಿಳಾ ಸಪ್ತಾಹದ ಅಂಗವಾಗಿ ಜೆ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವನ ಜೀವನದಲ್ಲಿ ಶಿಶು ಹಾಗೂ ಬಾಲ್ಯದ ಅವಧಿಯಲ್ಲಿ ಪೋಷಕರು, ಹೆತ್ತವರು ಸಮಸ್ಯೆಗಳನ್ನು ಅರಿತು ಪರಿಹರಿಸುವಲ್ಲಿ ಗಮನ ನೀಡುತ್ತಾರೆ. ಆದರೆ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಮಕ್ಕಳ ಜೊತೆಗಿನ ಅಂತರ ಕಡಿಮೆಯಾಗುತ್ತಾ ಸಾಗುತ್ತದೆ. ಮಕ್ಕಳ ಮೇಲೆ ಎಷ್ಟೇ ಪ್ರೀತಿ ಎಷ್ಟೇ ಇದ್ದರೂ ಸಹ ವಯೋಸಹಜ ಬದಲಾವಣೆಗಳಿಗೆ ಅನುಸಾರವಾಗಿ ಮಕ್ಕಳ ನಡುವೆ ಸ್ವಲ್ಪ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ವಯಸ್ಸಿಗೆ ಅನುಸಾರವಾಗಿ ಹದಿಹರೆಯದ ವಯಸ್ಸಿಗೆ ಬಂದ ಮಕ್ಕಳಲ್ಲಿ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ದೈಹಿಕ ಬದಲಾವಣೆಗಳು ಹಲವು ಸಮಸ್ಯೆಗಳನ್ನು ಉಂಡುಮಾಡುತ್ತವೆ. ಆದರೆ ಈ ವಿಚಾರದಲ್ಲಿ ಹಲವು ಹೆಣ್ಣುಮಕ್ಕಳು ತಮ್ಮ ಪೋಷಕರ ಬಳಿ ಮುಚ್ಚಿಟ್ಟು ತೊಂದರೆ ತಂದುಕೊಳ್ಳುತ್ತಿದ್ದಾರೆ.
ದೈಹಿಕವಾಗಿ ಉಂಟಾಗುವ ಬದಲಾವಣೆಗಳ ಬಗ್ಗೆ ಅರಿವು ಹೊಂದಿದ್ದರೆ ಬದಲಾವಣೆಗಳನ್ನು ಧನಾತ್ಮಕವಾಗಿ ಸ್ವೀಕರಿಸಬಹುದು. ಇಲ್ಲದಿದ್ದಲ್ಲಿ ಅರಿವಿನ ಕೊರತೆಯಿಂದಾಗಿ ಬದಲಾವಣೆಗಳು ಸಮಸ್ಯೆಯಾಗಿ ಪರಿವರ್ತಿತವಾಗುವ ಸಾಧ್ಯತೆ ಹೆಚ್ಚು. ಇಂಥಹ ಸೂಕ್ಷ್ಮ ವಿಚಾರಗಳನ್ನು ತಮ್ಮ ಶಿಕ್ಷಕರ ಬಳಿ, ಪೋಷಕರ ಬಳಿ, ಅಥವಾ ವೈದ್ಯರ ಬಳಿ ಮುಕ್ತವಾಗಿ ಚರ್ಚಿಸಬೇಕು. ಹದಿಹರೆಯವು ಎಲ್ಲರಲ್ಲೂ ಸಹಜವಾಗಿ ನಡೆಯುವ ಪ್ರಕ್ರಿಯೆ. ನಾವುಗಳು ಕೂಡು ಸಮಾಜದಲ್ಲಿ ಬದುಕುತ್ತಿದ್ದು, ಪ್ರತೀಯೊಬ್ಬರೂ ಅಕ್ಕ-ತಂಗಿ, ಅಣ್ಣ-ತಮ್ಮ, ತಂದೆ-ತಾಯಿ ಎನ್ನುವ ಹಲವು ಸಂಬಂಧಗಳಿಗೆ ಬೆಲೆಕೊಡುವ ಸಮಾಜದಲ್ಲಿ ಇದ್ದು. ಇಂಥಹ ದೈಹಿಕ ಬದಲಾವಣೆಗಳಿಗೆ ಯಾರೂ ಕೀಳರಿಮೆಯಿಂದ ನೋಡುವುದಿಲ್ಲ ಎಂದು ಧೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಜೇಸಿರೇಟ್ ಅಧ್ಯಕ್ಷೆ ವಿದ್ಯಾರಾಜು ಮಾತನಾಡಿದರು. ಶಾಲಾ ವಿದ್ಯಾರ್ಥಿನಿಯರು ವೈದ್ಯರೊಂದಿಗೆ ಸಂವಾದ ನಡೆಸಿ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷ ರವಿಕುಮಾರ್, ಜೇಸಿರೇಟ್ ಕಾರ್ಯದರ್ಶಿ ದೀಪಿಕಾ ಪ್ರಸಾದ್, ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖ್ಯ ಶಿಕ್ಷಕರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಹದಿಹರೆಯದ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿಕೊಳ್ಳುವುದರ ಮೂಲಕ ಎಂತಹ ಕ್ಲಿಷ್ಟಕರ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು: ಡಾ.ಮೇಘಾ.










