ಹಿಜಾಬ್ ವಿಚಾರಣೆ ನಾಳೆಗೆ ಮುಂದೂಡಿಕೆ – ಇಂದು ಹೈಕೋರ್ಟ್‌ನಲ್ಲಿ ಏನಾಯ್ತು..?

47
firstsuddi

ಬೆಂಗಳೂರು : ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್ ನ ಪೂರ್ಣ ಪೀಠದಲ್ಲಿ ನಾಲ್ಕನೇ ದಿನವೂ ವಿಚಾರಣೆ ನಡೀತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಅರ್ಜಿದಾರರ ಪರ ವಕೀಲರೇ ವಾದ ಮಂಡಿಸಿದರು. 2 ಗಂಟೆಗೂ ಹೆಚ್ಚು ಕಾಲ ವಾದ ಆಲಿಸಿದ ಪೀಠ, ವಿಚಾರಣೆಯನ್ನು ನಾಳೆ ಮಧ್ಯಾಹ್ನ 3.30ಕ್ಕೆ ಮುಂದೂಡಿದೆ.

ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್ ಅವರು, ಶಿಕ್ಷಣ ಕಾಯ್ದೆಯ ಪ್ರಕಾರ ಒಮ್ಮೆ ನಿಗದಿಪಡಿಸಿದ ಸಮವಸ್ತ್ರವನ್ನು 5 ವರ್ಷ ಬದಲಿಸಬಾರದು. ಬದಲಿಸುವ ಮುನ್ನ 1 ವರ್ಷ ಮೊದಲೇ ಪೋಷಕರಿಗೆ ನೋಟಿಸ್ ನೀಡಬೇಕು.ಆದರೆ, ಸರ್ಕಾರ ಯಾವುದೇ ನೋಟಿಸ್ ನೀಡದೆ, ಪೋಷಕರ ಅಹವಾಲನ್ನೂ ಆಲಿಸದೆ ಹಿಜಾಬ್ ನಿರ್ಬಂಧಿಸಿದೆ.
ಸಮವಸ್ತ್ರ ನಿಗದಿ ಮಾಡುವ ಅಧಿಕಾರವನ್ನು ಕಾಲೇಜು ಅಭಿವೃದ್ದಿ ಸಮಿತಿ(ಸಿಡಿಸಿ)ಗೆ ನೀಡಲಾಗಿದೆ. ಆದರೆ, ಈ ಸಿಡಿಸಿ ಪ್ರಾಧಿಕಾರವಲ್ಲ. ಹಾಗಿದ್ದರೂ, ಸರ್ಕಾರ ಇದಕ್ಕೆ ಸಮವಸ್ತ್ರ ನಿಗದಿ ಮಾಡುವ ಅಧಿಕಾರ ನೀಡಿದೆ.

ದಕ್ಷಿಣ ಭಾರತದಲ್ಲಿ ಶಿಕ್ಷಕರೂ ಸೇರಿದಂತೆ ಹಲವರು ಧಾರ್ಮಿಕ ಗುರುತುಗಳನ್ನು ಧರಿಸುತ್ತಾರೆ. ದೇವಸ್ಥಾನದ ಆನೆಯ ಮೇಲೆ ಯಾವ ಸಂಪ್ರದಾಯದಂತೆ ನಾಮ ಹಚ್ಚಬೇಕು ಎಂಬ ಕುರಿತು ವಿವಾದವಾಗಿತ್ತು. ಶಾಲೆಯಲ್ಲಿ ಮಕ್ಕಳು ಬಳೆ ತೊಟ್ಟು ಹೋಗುತ್ತಾರೆ. ಇದು ಕೂಡ ಧಾರ್ಮಿಕ ಗುರುತು. ಸಿಕ್ಕರು, ಮುಸ್ಲಿಮರು ಗಡ್ಡ ಬಿಡುತ್ತಾರೆ. ಹಿಂದೂ ಯುವತಿಯರು ಬಿಂದಿ, ಬಳೆ ತೊಡುತ್ತಾರೆ. ಕ್ರಿಶ್ಚಿಯನ್ ವಿದ್ಯಾರ್ಥಿನಿಯರು ಕ್ರಾಸ್ ಧರಿಸುತ್ತಾರೆ. ಸಿಖ್ ವಿದ್ಯಾರ್ಥಿಗಳು ಟರ್ಬನ್ ತೊಡುತ್ತಾರೆ. ಎಲ್ಲ ಧರ್ಮದವರೂ ಅವರವರ ಧಾರ್ಮಿಕ ಗುರುತುಗಳನ್ನು ಬಳಸುತ್ತಾರೆ. ಅದಾವುದನ್ನೂ ಸರ್ಕಾರ ನಿರ್ಬಂಧಿಸಿಲ್ಲ. ಹೀಗಿದ್ದಾಗ, ಬಡ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ನಿರ್ಬಂಧಿಸಿದ್ದೇಕೆ ಎಂದು ಪ್ರಶ್ನಿಸಿದರು.

ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆಯೇ ಕಡಿಮೆಯಿದೆ. ಸರ್ಕಾರದ ಇಂತಹ ಆದೇಶಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹಿನ್ನಡೆಯಾಗಿದೆ. ಸರ್ಕಾರದ ಆದೇಶ ರದ್ದುಪಡಿಸಲು ಮನವಿ ಮಾಡಿ  ರವಿವರ್ಮಕುಮಾರ್ ವಾದಮಂಡನೆ ಮುಕ್ತಾಯಗೊಳಿಸಿದ್ದಾರೆ.

ಪ್ರೊ. ರವಿವರ್ಮ ಕುಮಾರ್ ವಾದ ಮಂಡನೆ ಬಳಿಕ ಅರ್ಜಿದಾರ ವಿದ್ಯಾರ್ಥಿನಿಯೊಬ್ಬರ ಪರ ಬಾಂಬೆಯ ಹಿರಿಯ ವಕೀಲ ಯೂಸುಫ್ ಮುಕ್ಕಲಾ ವಾದ ಮಂಡಿಸಿದರು. ಹಿಜಾಬ್ ನಿರ್ಬಂಧಿಸಿರುವ ಸರ್ಕಾರದ ಕ್ರಮ ನಿರಂಕುಶ ಆದೇಶ. ನಾಳೆ ವಿದ್ಯಾರ್ಥಿನಿಯರು ಕನ್ನಡಕ ಹಾಕಿದರೂ ನಿರ್ಬಂಧಿಸುತ್ತಾರಾ.. ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಲಾಗಿದೆ. ಸಮವಸ್ತ್ರದ ಹೆಸರಲ್ಲಿ ಬೇರೆಯವರ ಹಕ್ಕುಗಳನ್ನು ಮೊಟಕುಗೊಳಿಸಲಾಗದು. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು ತಮ್ಮ ಸಂಪ್ರದಾಯ ಹಾಗೂ ಹಕ್ಕು ಎಂದು ಭಾವಿಸಿದ್ದಾರೆ. ಇದನ್ನು ಸರ್ಕಾರವೂ ಗೌರವಿಸಬೇಕು. ಹಿಜಾಬ್ ಹೆಸರಲ್ಲಿ ಇವರ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳಬಾರದು ಎಂದು ವಾದಿಸಿದರು.