ಹುಬ್ಬಳ್ಳಿ : ಕಿಮ್ಸ್ ನ ವೈದ್ಯಕೀಯ ವಿದ್ಯಾರ್ಥಿಗಳು ತಂಗಿದ್ದ ಕಟ್ಟಡದ ಮೇಲೆ ಕಿಡಗೇಡಿಗಳು ತಡರಾತ್ರಿ ಕಲ್ಲು ತೂರಿದ ಘಟನೆ ನಡೆದಿದೆ.
ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಇನ್ಫೋಸಿಸ್ ಧರ್ಮಶಾಲಾ ಕಟ್ಟಡದಲ್ಲಿ ವೈದ್ಯ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕಿಮ್ಸ್ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಆದರೆ ತಡರಾತ್ರಿ ಏಕಾಏಕಿಯಾಗಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಕಿಟಕಿ ಗ್ಲಾಸ್ ಒಡೆದಿದ್ದು, ಓರ್ವ ವಿದ್ಯಾರ್ಥಿಯ ಮೊಣಕಾಲಿಗೆ ಗಾಯವಾಗಿದೆ.
ಕಿಮ್ಸ್ ನ 136 ವೈದ್ಯಕೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಈ ಕಟ್ಟಡದಲ್ಲಿದ್ದಾರೆ. ಎಂದಿನಂತೆ ಊಟ ಮಾಡಿ ಮಲಗಿದ್ದ ವಿದ್ಯಾರ್ಥಿಗಳ ಮೇಲೆ ಕಲ್ಲು ಮತ್ತು ಇಟ್ಟಿಗೆಗಳಿಂದ ತೂರಿದ್ದು, ಕಿಟಕಿಯ ಗಾಜುಗಳು ಪುಡಿಪುಡಿಯಾಗಿ ಹಾಸಿಗೆಯಲ್ಲಿ ಬಿದ್ದಿವೆ. ಇದರಿಂದ ವಿದ್ಯಾರ್ಥಿಗಳು ಕೆಲಕಾಲ ಆತಂಕಗೊಂಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಕಿಮ್ಸ್ ಭದ್ರತಾ ಸಿಬ್ಬಂದಿ ಹಾಗೂ ಪಕ್ಕದಲ್ಲಿರುವ ಕಿಮ್ಸ್ ಕ್ವಾಟರ್ಸ್ ನಿವಾಸಿಗಳು ಗಾಯಾಳು ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.










