10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ- ಪ್ರಿನ್ಸಿಪಾಲ್ ಬಂಧನ…

65

ಬೆಂಗಳೂರು: ನಗರದ ವರ್ತೂರು ಸಮೀಪದ ಖಾಸಗಿ ಶಾಲೆಯ ಪ್ರಾಂಶುಪಾಲನೊಬ್ಬ 10 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.

ನಿನ್ನೆ ಎಂದಿನಂತೆ ವಿದ್ಯಾರ್ಥಿನಿ ಶಾಲೆಗೆ ತೆರಳಿದ್ದಳು. ಶಾಲೆಗೆ ಬಂದ ವಿದ್ಯಾರ್ಥಿನಿಯನ್ನು ಕಂಡ ಕಾಮುಕ ಪ್ರಾಂಶುಪಾಲ, ಖಾಲಿ ರೂಮಿಗೆ ಕರೆದೊಯ್ದು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ವಿದ್ಯಾರ್ಥಿನಿ ಮನೆಗೆ ವಾಪಸ್ ಆಗಿದ್ದಳು. ಮನೆಗೆ ಮರಳಿದ ವೇಳೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ವಿಪರೀತ ಹೊಟ್ಟೆ ನೋವಿನಿಂದ ಬಳಲಿದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ 10 ವರ್ಷದ ಬಾಲಕಿ ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದಳು. ಗುಂಜೂರು ಸಮೀಪದ ಖಾಸಗಿ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ಬೆಳಗ್ಗೆ 8.30ಕ್ಕೆ ಶಾಲೆಗೆ ತೆರಳಿದ್ದು ಮಧ್ಯಾಹ್ನ 3.30ಕ್ಕೆ ಶಾಲೆಯಿಂದ ಮನೆಗೆ ವಾಪಸ್ಸಾಗಿದ್ದಾಳೆ. ಮನೆಗೆ ಬಂದ ಮೇಲೆ ತನ್ನ ತಾಯಿಗೆ ಹೊಟ್ಟೆ ನೋವು ಎಂದು ಹೇಳಿಕೊಂಡಿದ್ದಾಳೆ.

ಸ್ನಾನ ಮಾಡಿಸಿ ಕರೆತರುವಾಗ ರಕ್ತದ ಕಲೆಗಳು ಕಂಡುಬಂದಿದೆ. ಈ ವಿಚಾರವಾಗಿ ಕೇಳಿದಾಗ ಬಾಲಕಿ ಘಟನೆಯನ್ನು ವಿವರಿಸಿದ್ದಾಳೆ. ಮೊದಲು ಪ್ರಾಂಶುಪಾಲರ ಕೊಠಡಿಗೆ ಕರೆದುಕೊಂಡು ಹೋಗಿದ್ದು, ವಿಶ್ರಾಂತಿ ಪಡೆಯುವಂತೆ ಹೇಳಿ ಅತ್ಯಾಚಾರ ಎಸಗಿದರು. ನಂತರ ಕೇಕ್ ತಿನ್ನಿಸಿ ಕಳುಹಿಸಿದರು ಎಂದು ವಿವರಿಸಿದ್ದಾಳೆ.

ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಸಂಬಂಧ ವರ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.