ಬೆಂಗಳೂರು : ಇಂದಿನಿಂದ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಿದ್ದು, ಇಂದು ಬಿಬಿಎಂಪಿ ಮಹಿಳೆಯರ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಮೂಡಲಪಾಳ್ಯದಲ್ಲಿ ಮಕ್ಕಳ ಲಸಿಕೆ ಅಭಿಯಾನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿ ಚಾಲನೆ ನೀಡಿದರು.
ಈ ವೇಳೆ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಲಸಿಕಾ ಕಾರ್ಯಕ್ರಮ ಹೊಸ ವರ್ಷದಲ್ಲಿ ಆಗುತ್ತಿದೆ. ದೇಶ ಕೊರೊನಾ ಎದುರಿಸಿದ ರೀತಿ ಹಾಗೂ ಲಸಿಕೆ ಅಭಿಯಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಮೂರನೇ ಅಲೆ ಅಕ್ಕಪಕ್ಕದ ರಾಜ್ಯದಲ್ಲಿ ಬಹಳ ಹೆಚ್ಚಿದೆ. ರಾಜ್ಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿಯಲ್ಲಿ ಭದ್ರತೆ, ಆರ್ಟಿಪಿಸಿಆರ್ ಪರೀಕ್ಷೆ, ಕೋವಿಡ್ ಟೆಸ್ಟ್, ಲಸಿಕೆ ಹೆಚ್ಚು ಮಾಡಲಾಗುತ್ತಿದೆ. ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದರು.
ಇಂದಿನಿಂದ ಪ್ರಥಮ ಲಸಿಕೆ ಡೋಸ್ ನೀಡಲಾಗುತ್ತದೆ. 2ನೇ ಡೋಸ್ ಕೂಡಾ ಅವಧಿ ಬಂದಾಗ ಆರಂಭಿಸಲಾಗುತ್ತದೆ ಮತ್ತು ರಾಜ್ಯದಲ್ಲಿ 43 ಲಕ್ಷ, ಬೆಂಗಳೂರಲ್ಲಿ ಒಟ್ಟು 4 ಲಕ್ಷ 41 ಸಾವಿರ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಇಂದು ಒಂದೇ ದಿನ 40 ಸಾವಿರ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ನಗರದ 255 ಶಾಲಾ ಕಾಲೇಜಿನಲ್ಲಿ ಲಸಿಕೆ ಕೊಡಲಾಗುತ್ತದೆ ಎಂದು ಹೇಳಿದರು.
ವಸತಿ ಸಚಿವ ವಿ.ಸೋಮಣ್ಣ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










