16 ಬಂಡಾಯ ಶಿವಸೇನೆ ಶಾಸಕರಿಗೆ ಅನರ್ಹತೆ ನೋಟಿಸ್ ಜಾರಿ…

60
firstsuddi

ಮುಂಬೈ : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿರುವ ಏಕನಾಥ್ ಶಿಂದೆ ಪಾಳೆಯದ ಸುಮಾರು 38 ಶಾಸಕರು ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಈ ಬಣದಲ್ಲಿರುವ 16 ಶಾಸಕರಿಗೆ ವಿಧಾನಸಭೆಯ ಉಪ ಸ್ಪೀಕರ್ ಅನರ್ಹತೆಯ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ, ಎಲ್ಲ 16 ಶಾಸಕರು ಜೂನ್ 27ರ ಸೋಮವಾರದೊಳಗೆ ನೋಟಿಸ್ ಗೆ ತಮ್ಮ ಲಿಖಿತ ಉತ್ತರಗಳನ್ನು ಸಲ್ಲಿಸಬೇಕೆಂದು ಸೂಚಿಸಿದ್ದಾರೆ.

ಏಕನಾಥ್ ಬಣಕ್ಕೆ ಪ್ರತ್ಯೇಕ ಹೆಸರು: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಏಕನಾಥ್ ಶಿಂಧೆ ಬಣದ ಶಿವಸೇನೆ ಬಂಡಾಯ ಶಾಸಕರು ತಮ್ಮ ಗುಂಪಿಗೆ ಶಿವಸೇನಾ ಬಾಳಾಸಾಹೇಬ್ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಮಾಜಿ ಸಚಿವ, ರೆಬೆಲ್ ಶಾಸಕ ದೀಪಕ್ ಕೇಸರ್ಕರ್ ಮಾಹಿತಿ ನೀಡಿದ್ದಾರೆ.

ಇದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರೋಧ ವ್ಯಕ್ತಪಡಿಸಿದ್ದು, ಬಂಡಾಯ ಶಾಸಕರು ಏನು ಬೇಕಾದರೂ ಮಾಡಬಹುದು, ಅವರ ವಿಷಯಗಳಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬಹುದು, ಆದರೆ ಯಾರೂ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಬಾರದು ಎಂದು ಎಚ್ಚರಿಸಿದ್ದಾರೆ.

ಇತ್ತ ಮಹಾರಾಷ್ಟ್ರ ಬಿಕ್ಕಟ್ಟಿನಿಂದಾಗಿ ಶಿವಸೇನಾ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಬಂಡಾಯ ಶಾಸಕರ ಕಚೇರಿಗಳಿಗೆ ಶಿವಸೈನಿಕರು ಧ್ವಂಸ ಮಾಡಿದ್ದಾರೆ. ಪುಣೆಯಲ್ಲಿರುವ ಬಂಡಾಯ ಪಕ್ಷದ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಗೆ ಶಿವಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಸಾವಂತ್ ಏಕನಾಥ್ ಶಿಂಧೆ ಬಣದ ಬಂಡಾಯ ಶಿವಸೇನೆ ಶಾಸಕರಲ್ಲಿ ಒಬ್ಬರಾಗಿದ್ದು, ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.