ಕೋಲಾರ : ಕರ್ನಾಟಕ ಹೈಕೋರ್ಟ್ ನ ಸಿವಿಲ್ ನ್ಯಾಯಾಧೀಶೆಯಾಗಿ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನಾರಾಯಣಸ್ವಾಮಿ ಹಾಗೂ ವೆಂಕಟರತ್ನಮ್ಮ ಅವರ ಏಕೈಕ ಪುತ್ರಿ ಎನ್.ಗಾಯತ್ರಿ (25) ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, ಗಾಯಿತ್ರಿ ಅವರು ಆಯ್ಕೆಯಾಗಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದ ಗಾಯತ್ರಿ ಅವರು ಸತತ ಪರಿಶ್ರಮದಿಂದ ಕೊನೆಗೂ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
ಬಡತನದ ಹಿನ್ನೆಲೆಯಿಂದ ಬಂದ ಎನ್.ಗಾಯತ್ರಿ ಅವರು, ಬಂಗಾರಪೇಟೆ ತಾಲೂಕಿನ ಎನ್. ಕಾರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿ, ಮಾಧ್ಯಮಿಕ, ಪಿಯು ಶಿಕ್ಷಣ ಪಡೆದುಕೊಂಡಿದ್ದಾರೆ. ನಂತರ ಕೋಲಾರದ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿದ್ದಾರೆ. ಬಳಿಕ ಕೆಜಿಎಫ್ ನ ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜಿನಲ್ಲಿ ಪದವಿ ಪೂರೈಸಿ, ಕರ್ನಾಟಕಕ್ಕೆ 4ನೇ ರ್ಯಾಂಕ್ ಪಡೆದಿದ್ದಾರೆ. ಇದೀಗ ಎರಡನೇ ಪ್ರಯತ್ನದಲ್ಲಿ ನೂತನ ಸಿವಿಲ್ ನ್ಯಾಯಾಧೀಶೆಯಾಗಿ ಎನ್. ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ.










