5 ಕೋಟಿ ರೂ.ಮೌಲ್ಯದ 2 ವಾಚ್ ಜಪ್ತಿ – ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆ ಏನು?

212
firstsuddi

ಮುಂಬೈ : ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಬಳಿಯಿದ್ದ ಎರಡು ಐಷಾರಾಮಿ ವಾಚ್‍ಗಳನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಟಿ-20 ವಿಶ್ವಕಪ್ ನಲ್ಲಿ ಸೋಲನ್ನು ಅನುಭವಿಸಿದ ಟೀಂ ಇಂಡಿಯಾದ ಆಟಗಾರರು ದುಬೈನಿಂದ ತವರಿಗೆ ಮರಳುತ್ತಿದ್ದಾರೆ. ಅದರಂತೆ ಭಾನುವಾರ ರಾತ್ರಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರ್ದಿಕ್ ಪಾಂಡ್ಯ ಬಂದಿಳಿದಿದ್ದರು. ಈ ವೇಳೆ, ಅವರ ಬಳಿಯಿದ್ದ ಎರಡು ವಾಚ್​ಗಳನ್ನು ಸರಿಯಾದ ದಾಖಲೆಗಳಿಲ್ಲದ ಕಾರಣಕ್ಕೆ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಈ ಬಗ್ಗೆ ಸ್ವತಃ ಹಾರ್ದಿಕ್ ಪಾಂಡ್ಯ ಅವರೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ವಾಚ್ ಜಪ್ತಿ ಮಾಡಿಲ್ಲ. ನಾನೇ ಕಸ್ಟಮ್ಸ್ ಆಫೀಸಿಗೆ ತೆರಳಿ ವಾಚ್ ಖರೀದಿಸಿದ ಬಗ್ಗೆ ಮಾಹಿತಿ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ ವಾಚ್ ನ ಬೆಲೆ ಅಂದಾಜು 1.5 ಕೋಟಿ ರೂಪಾಯಿಯೇ ಹೊರತು 5 ಕೋಟಿ ಅಲ್ಲ. ಈ ವಿಚಾರಕ್ಕೆ ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನು ಅವರಿಗೆ ನಾನು ನೀಡುತ್ತೇನೆ ಎಂದು ಪಾಂಡ್ಯ ಬರೆದುಕೊಂಡಿದ್ದಾರೆ.