ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಗದೇವನಹಳ್ಳಿಯಲ್ಲಿರುವ ಗೀತಂ ವಿಶ್ವವಿದ್ಯಾಲಯದ ಹಾಸ್ಟೆಲ್ ಕ್ಯಾಂಪಸ್ ನ 6 ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಉಗಾಂಡ ದೇಶದ ಹಸೀನಾ ಮೃತ ದುರ್ದೈವಿಯಾಗಿದ್ದು, ಗೀತಂ ವಿಶ್ವವಿದ್ಯಾಲಯದ ಬಿಬಿಎ ವಿದ್ಯಾರ್ಥಿನಿಯಾಗಿದ್ದಾರೆ. ಬಟ್ಟೆ ತರಲೆಂದು ಮಹಡಿ ಮೇಲೆ ಹೋಗಿದ್ದ ಹಸೀನಾ ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ 6ನೇ ಮಹಡಿಯಿಂದ ಬಿದ್ದಿದ್ದಾರೆ.
ವಿದ್ಯಾರ್ಥಿನಿ ಹಸೀನಾ 6ನೇ ಮಹಡಿಯಿಂದ ಕೆಳಕ್ಕೆ ಬೀಳುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿ ಅಲ್ಲಿಗೆ ಓಡಿ ಬಂದಿದ್ದಾರೆ. ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನ, ಮಾರ್ಗಮಧ್ಯೆಯೇ ಹಸೀನಾ ಕೊನೆಯುಸಿರೆಳೆದಿದ್ದಾಳೆ.
ಹಸೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಆಕೆ ಸಾವಿನಿಂದ ರೊಚ್ಚಿಗೆದ್ದ ಅಲ್ಲಿನ ಕಾಲೇಜ್ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿ ಹಾಸ್ಟೆಲ್ ನ ಕಿಟಕಿ ಬಾಗಿಲಿನ ಗಾಜುಗಳನ್ನು ಪುಡಿ, ಪುಡಿಗೊಳಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಣಾಮವಾಗಿ ಹಾಸ್ಟೆಲ್ ನಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಬೇಕಾಯಿತು.










