ಬೆಂಗಳೂರು : ನಗರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹುಳಿಮಾವಿನ ಅಕ್ಷಯ ನಗರದ ಅಪಾರ್ಟ್ ಮೆಂಟ್ ಒಂದರ ಹಿಂಭಾಗದ ನಿರ್ಜನ ಪ್ರದೇಶದಲ್ಲಿ 6 ತಿಂಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ.
ವ್ಯಕ್ತಿಯೊಬ್ಬರು ಕೊಟ್ಟ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರೇ ಆ ದೃಶ್ಯವನ್ನು ನೋಡಿ ಆಘಾತಕ್ಕೊಳಗಾಗಿದ್ದರು. ಏಕೆಂದರೆ ಮರದ ಕೊಂಬೆಯಲ್ಲಿ ನೇತಾಡುತಿದ್ದ ತಲೆ ಬುರುಡೆ ಪತ್ತೆಯಾಗಿದ್ದು, ಶವ 6 ತಿಂಗಳಿಂದ ಕೊಳೆಯುತ್ತಿತ್ತು.
ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ನಗರದಲ್ಲಿ ಕಳೆದ 6 ತಿಂಗಳಲ್ಲಿ ಕಾಣೆಯಾದವರ ದೂರಿನ ಪಟ್ಟಿಯನ್ನು ಜಾಲಾಡಿದ್ದಾರೆ. ಈ ವೇಳೆ ಕಳೆದ ವರ್ಷ ಜುಲೈನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ ನಾಪತ್ತೆ ಕೇಸ್ ದಾಖಲಾಗಿರುವುದು ತಿಳಿದುಬಂದಿದೆ. ಮರದಲ್ಲಿ ನೇತಾಡುತ್ತಿದ್ದ ಅಸ್ಥಿಪಂಜರದ ಮೂಳೆಯ ಡಿಎನ್ಎ ಸ್ಯಾಂಪಲ್ ಅನ್ನು ಎಫ್ಎಸ್ಎಲ್ ಗೆ ಕಳುಹಿಸಿದ್ದಾರೆ.
ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾಧ್ಯಮಗಳಿಗೆ ಮಾಹಿತಿ ನೀಡಿ, ನಿನ್ನೆ ಬೆಳಗ್ಗೆ ನಮಗೆ ಮಾನವನ ಅಸ್ತಿಪಂಜರ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮಹಿಳೆಯ ಚಪ್ಪಲಿ, ಅಲ್ಲದೆ ಕುತ್ತಿಗೆಗೆ ಬಳಸುವ ನೆಕ್ಲೆಸ್ ಎಲ್ಲವೂ ಪತ್ತೆಯಾಗಿತ್ತು. ಹೀಗಾಗಿ ನಾವು ಮಿಸ್ಸಿಂಗ್ ಕೇಸ್ ಗಳನ್ನ ಹುಡುಕಲು ಶುರುಮಾಡಿದ್ವಿ. ಕಳೆದ ವರ್ಷ ಜುಲೈನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ ನಾಪತ್ತೆ ಕೇಸ್ ದಾಖಲಾಗಿತ್ತು. ಈಗ ಅಲ್ಲಿ ಸಿಕ್ಕಿರುವ ವಸ್ತುಗಳು ಎಲ್ಲ ವಸ್ತುಗಳು ಮ್ಯಾಚ್ ಮಾಡಲಾಗಿದ್ದು ಮಹಿಳೆಯ ಶವ ಎಂಬುದು ಗೊತ್ತಾಗಿದೆ.
ನೇಪಾಳ ಮೂಲದ ಮಹಿಳೆಯೊಬ್ಬರು ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ನೇಪಾಳ ಮೂಲದ ಕಾರ್ಮಿಕನೋರ್ವನ ಪತ್ನಿ. ಎರಡು ವರ್ಷದ ಹಿಂದೆ ಇಬ್ಬರಿಗೂ ಮದುವೆಯಾಗಿತ್ತು. ಅವರಿಗೆ ಒಂದು ಮಗು ಕೂಡ ಇದೆ. ಇಬ್ಬರ ಮಧ್ಯೆ ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಗುತ್ತಿದ್ದು, ಮಹಿಳೆ ಮನೆ ಬಿಟ್ಟು ಹೋದವರು ವಾಪಸ್ ಬಂದಿರಲಿಲ್ಲ. ಆಗ ಪತಿ ಪತ್ನಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದರು. ಆ ಸಮಯದಲ್ಲಿ ಹುಳಿಮಾವು ಪೊಲೀಸ್ ಠಾಣೆ ಪೊಲೀಸರು ಹುಡುಕುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ದೂರು ದಾಖಲಿಸಿದ ಸಮಯದಲ್ಲಿ ಅವರು ನೀಡಿದ್ದ ಮಾಹಿತಿ ಆಧಾರವಾಗಿಟ್ಟುಕೊಂಡು ಕೂಲಂಕುಷವಾಗಿ ಪರಿಶೀಲಿಸಿದಾಗ ಪತ್ತೆಯಾದ ಅಸ್ಥಿಪಂಜರ ಪುಷ್ಪಾ ದಾಮಿಯವರದ್ದು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.










