ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯ ಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಸಾಥ್ ನೀಡಿದರು. ಸಮಾರಂಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್ ಆರಂಭವಾಯಿತು. ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾಪಡೆಗಳು ಕೂಡ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗಿಯಾಗಿದ್ದು, ಈಜಿಪ್ಟ್ ಸೇನಾ ಪಡೆಗಳ 144 ಸೈನಿಕರು ರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಅರ್ಜುನ್ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಕೆ9 ವಜ್ರ ಮತ್ತು ಆಕಾಶ್ ವೆಪನ್ ಸಿಸ್ಟಮ್ ಅನ್ನು ಭಾರತೀಯ ಸೇನೆಯಿಂದ ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅಮರ್ ಜವಾನ್ ಜ್ಯೋತಿಗೆ ಆಗಮಿಸಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಗೌರವ ಸಲ್ಲಿಸಿದರು.










