ಹುಬ್ಬಳ್ಳಿ : ನಗರದ ಖಾಸಗಿ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಕೊರೊನಾ ದೃಢಪಟ್ಟಿದ್ದು, ಶಾಲೆಗೆ ರಜೆ ಘೋಷಿಸಲಾಗಿದೆ.
ವಿದ್ಯಾರ್ಥಿಯ ಸಹೋದರಿ ಧಾರವಾಡದ ಎಸ್ಡಿಎಂ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಳೆ. ಎಂಬಿಬಿಎಸ್ ವಿದ್ಯಾರ್ಥಿನಿಗೆ ಪಾಸಿಟಿವ್ ಬಂದಿದ್ದರಿಂದ ಅವರ ಮನೆಯಲ್ಲಿರುವ ಕುಟುಂಬಸ್ಥರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಆಗ ಬಾಲಕನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ನಿನ್ನೆ ಪರೀಕ್ಷೆ ಮಾಡಿದ್ದು ಇಂದು ಪಾಸಿಟಿವ್ ವರದಿ ಬಂದಿದೆ. ನಗರದ ಆದರ್ಶನಗರದಲ್ಲಿರುವ ಜಿ.ವಿ.ಜೋಶಿ ರೋಟರಿ ಶಾಲೆಯ ಬಾಲಕನನ್ನು ಈಗಾಗಲೇ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಲಾಗಿದೆ. ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಇಂದು ಮಧ್ಯಾಹ್ನದಿಂದಲೇ ಶಾಲೆಯಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಪ್ರಾಂಶುಪಾಲ ನರೇಶ್ ಪಾಟೀಲ್ ಅವರು, ಮುಂಜಾಗ್ರತಾ ಕ್ರಮವಾಗಿ ನಾಳೆ ಶಾಲೆಯಲ್ಲಿರುವ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ಜೊತೆಗೆ ಸೋಮವಾರದವರೆಗೆ ರೋಟರಿ ಶಾಲೆಗೆ ರಜೆ ನೀಡಲಾಗಿದೆ ಎಂದರು.










