ಚಿಕ್ಕಮಗಳೂರು: ತ್ಯಾಗ, ಸೇವೆ ಮತ್ತು ದಾನದಿಂದ ಮಾತ್ರ ಮನುಷ್ಯ ದೊಡ್ಡವನಾಗುತ್ತಾನೆ, ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾನೆ ಎಂದು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಹೇಳಿದರು.ನಗರದ ಅಗಸರ ಬೀದಿಯ ಅಂಗನವಾಡಿಯಲ್ಲಿ ವಿಶ್ವ ಸೇವಾದಿನದ ಪ್ರಯುಕ್ತ ಲಯನ್ಸ್ ಮತ್ತು ಲಯನೆಸ್ ಸಂಸ್ಥೆಯಿಂದ ನೀಡಲಾದ ಸಮವಸ್ತ್ರಗಳನ್ನು ಬುಧವಾರ ಮಕ್ಕಳಿಗೆ ವಿತರಿಸಿ ಅವರು ಮಾತನಾಡಿದರು.ಕೇವಲ ಹಣ ಗಳಿಸಿ ಶ್ರೀಮಂತರಾಗುವುದರಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯುವುದಿಲ್ಲ, ತ್ಯಾಗ, ದಾನ ಮತ್ತು ಸೇವೆಯಿಂದ ಅವು ಲಭಿಸುತ್ತವೆ ಎಂದ ಅವರು ಮನುಷ್ಯರು ತಮ್ಮ ದುಡಿಮೆಯ ಹಣದಲ್ಲಿ ಅಲ್ಪಭಾಗವನ್ನಾದರೂ ಸಮಾಜ ಸೇವೆಗೆ ವಿನಿಯೋಗಿಸಬೇಕು ಎಂದು ಕಿವಿಮಾತು ಹೇಳಿದರು.ಈ ಅಂಗನವಾಡಿಗೆ ಈಗಾಗಲೇ ಲಯನ್ಸ್ ಸಂಸ್ಥೆಯಿಂದ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ನೆರವನ್ನು ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಎಳೆಯ ವಯಸ್ಸಿನಲ್ಲೇ ನಯ, ವಿನಯ ಮತ್ತು ಮಾನವೀಯತೆಯನ್ನು ಕಲಿಸಬೇಕು ಎಂದು ಸಲಹೆ ಮಾಡಿದರು.ಅಂಗನವಾಡಿಗೆ ಅಗತ್ಯವಿರುವ ಕುರ್ಚಿಗಳನ್ನು ವೈಯಕ್ತಿಕವಾಗಿ ಒದಗಿಸುವ ಭರವಸೆ ನೀಡಿದರು.
ವಿಶ್ವಶಾಂತಿ ಮತ್ತು ಇತ್ತೀಚೆಗೆ ನಿಧನರಾದ ಲಯನ್ಸ್ ಅಧ್ಯಕ್ಷ ಕೆ.ಬಿ.ರವಿರಾಜ್ ರೈ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.ಲಯನ್ಸ್ ಜಿಲ್ಲಾ ರಾಜ್ಯಪಾಲರ ಪ್ರತಿನಿಧಿ ಹೆಚ್.ಸಿ.ಶಶಿಪ್ರಸಾದ್, ಕಾರ್ಯದರ್ಶಿ ಮನೋಜ್, ಖಜಾಂಚಿ ಜಯರಾಮೇಗೌಡ, ಮಾಜಿ ಅಧ್ಯಕ್ಷರಾದ ಎಂ.ಆರ್.ನಾಗರಾಜ್, ಕೆ.ಡಿ.ಪುಟ್ಟಣ್ಣ, ಲಯನೆಸ್ ಅಧ್ಯಕ್ಷೆ ಲಕ್ಷ್ಮೀನಂಜಯ್ಯ, ಕಾರ್ಯದರ್ಶಿ ಮೋಹನಕುಮಾರಿ, ಖಜಾಂಚಿ ಶಾಂತಿ ಅಪ್ಪಯ್ಯ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ, ದಾಕ್ಷಾಯಿಣಿ ಶ್ರೀನಿವಾಸ್ ಉಪಸ್ಥಿತರಿದ್ದರು.










