ಡೆತ್ ನೋಟ್ ಬರೆದಿಟ್ಟು ಕಬಡ್ಡಿ ತರಬೇತುದಾರ ನೇಣಿಗೆ ಶರಣು…

370
firstsuddi

ದಾವಣಗೆರೆ: ಡೆತ್ ನೋಟ್ ಬರೆದಿಟ್ಟು ಕಬಡ್ಡಿ ಕೋಚ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ. ರುದ್ರಪ್ಪ ಹೊಸಮನಿ ನೇಣಿಗೆ ಶರಣಾಗಿರುವ ಕಬಡ್ಡಿ ತರಬೇತುದಾರ ಇವರು ಬೆಂಗಳೂರಿನಲ್ಲಿ ಕಬಡ್ಡಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪ ರುದ್ರಪ್ಪ ಹೊಸಮನಿ ಮೇಲಿತ್ತು. ಪೋಕ್ಸೋ ಕಾಯ್ದೆಯಡಿ ರುದ್ರಪ್ಪ ಹೊಸಮನಿ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರ ರುದ್ರಪ್ಪ ಹೊಸಮನಿ ಅವರನ್ನು ಇತ್ತೀಚೆಗೆ ಅಮಾನತುಗೊಳಿಸಿ, ದೆಹಲಿ ಕಚೇರಿಗೆ ಹೋಗುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದ ರುದ್ರಪ್ಪ ಹೊಸಮನಿ ಅವರು ಹರಿಹರಕ್ಕೆ ತೆರಳಿ ಭಾನುವಾರ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ. ಕೊಠಡಿ ಪಡೆದ ಬಳಿಕ ಹೊರಗೆ ಬರದಿರುವುದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ರುದ್ರಪ್ಪ ಹೊಸಮನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.