ಮಾನವ ಸೇವೆ ಲಯನ್ಸ್ ಸಂಸ್ಥೆಯ ಪ್ರಮುಖ ಗುರಿ: ಹೆಚ್.ಆರ್.ಹರೀಶ್…

389
firstsuddi

ಚಿಕ್ಕಮಗಳೂರು: ಲಯನ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಸೇವಾ ಮನೋಭಾವನೆಯನ್ನು ಮತ್ತಷ್ಟು ಬೆಳೆಸಿಕೊಳ್ಳಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಸಲಹೆ ಮಾಡಿದರು.ನಗರದ ಲಯನ್ಸ್ ಸೇವಾ ಭವನದಲ್ಲಿ ಶನಿವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ನೂತನ ಅಧ್ಯಕ್ಷ ಸಿ.ಪಿ.ಸುರೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು.ಮಾನವ ಸೇವೆ ಲಯನ್ಸ್ ಸಂಸ್ಥೆಯ ಪ್ರಮುಖ ಗುರಿ, ಪ್ರಪಂಚದಲ್ಲಿ 48 ಸಾವಿರ ಕ್ಲಬ್‍ಗಳನ್ನು ಹೊಂದಿರುವ ಅದು 1 ಲಕ್ಷದ 68 ಸಾವಿರ ಸದಸ್ಯರ ಮೂಲಕ ಸಮಾಜ ಸೇವೆ ಮಾಡುತ್ತಿರುವ ಅತಿದೊಡ್ಡ ಸಂಸ್ಥೆಯಾಗಿದೆ ಎಂದರು.ಸಮಾಜ ನಮಗೆ ಶಿಕ್ಷಣ ಸೇರಿದಂತೆ ಎಲ್ಲವನ್ನೂ ಕೊಟ್ಟಿದೆ, ಅದರ ಋಣವನ್ನು ತೀರಿಸಬೇಕಾದರೆ ನಾವು ಸಮಾಜ ಸೇವೆ ಮಾಡಬೇಕು ದಾನ ಮತ್ತು ಸೇವೆಯ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ವೈಯಕ್ತಿಕವಾಗಿ ಸೇವೆ ಸಲ್ಲಿಸುವುದಕ್ಕಿಂತ ಲಯನ್ಸ್ ಸಂಸ್ಥೆಯ ಜೊತೆಗೂಡಿದರೆ ಹತ್ತಾರು ಜನ ಕೈಜೋಡಿಸುವುದರಿಂದ ದೊಡ್ಡ ಪ್ರಮಾಣದಲ್ಲಿ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ಸಲಹೆ ಮಾಡಿದರು.
ಬಿಜಿಎಸ್ ಮಹಾವಿದ್ಯಾಲಯದ ಕುಲಪತಿ ಡಾ|| ಸಿ.ಕೆ.ಸುಬ್ರಾಯ ಮಾತನಾಡಿ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುವ ಸೇವೆ ಅತ್ಯಂತ ಶ್ರೇಷ್ಠವಾದುದು, ಸೇವೆಯಿಂದ ಮಾತ್ರ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ನೂತನ ಅಧ್ಯಕ್ಷ ಸಿ.ಪಿ.ಸುರೇಶ್ ತಮ್ಮ ಅವಧಿಯಲ್ಲಿನ ಎಲ್ಲಾ ಸೇವಾ ಕಾರ್ಯಗಳಿಗೂ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ವಿಶ್ವಶಾಂತಿ ಮತ್ತು ಇತ್ತೀಚೆಗೆ ನಿಧನರಾದ ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಕೆ.ಬಿ.ರವಿರಾಜ್ ರೈ ಅವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಲಯನ್ಸ್ ರಾಜ್ಯಪಾಲರ ಜಿಲ್ಲಾ ಪ್ರತಿನಿಧಿ ಹೆಚ್.ಸಿ.ಶಶಿಪ್ರಸಾದ್, ಸಹಕಾರ್ಯದರ್ಶಿ ದಯಾಶಂಕರ್, ಖಜಾಂಚಿ ಜಯರಾಮೇಗೌಡ, ಲಯನೆಸ್ ಅಧ್ಯಕ್ಷೆ ಲಕ್ಷ್ಮೀ ನಂಜಯ್ಯ, ಕಾರ್ಯದರ್ಶಿ ಮೋಹನಕುಮಾರಿ, ಖಜಾಂಚಿ ಶಾಂತಿ ಅಪ್ಪಯ್ಯ, ಮಾಜಿ ಅಧ್ಯಕ್ಷ ಪ್ರೊ|| ಹೆಚ್.ಎಸ್. ಜಗಧೀಶಪ್ಪ ಉಪಸ್ಥಿತರಿದ್ದರು.