ರಂಗಭೂಮಿ ಜೀವಂತಿಕೆಯ ಸಂಕೇತ, ನಾಟಕಗಳು ಮನಸ್ಸನ್ನು ವಿಕಾಸಗೊಳಿಸುತ್ತವೆ : ಮಠಾಧೀಶ ಶ್ರೀ ಡಾ|| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ…

443
firstsuddi

ಚಿಕ್ಕಮಗಳೂರು: ಸಮಾಜದಲ್ಲಿರುವ ಅನಿಷ್ಠಗಳನ್ನು ನಿವಾರಣೆ ಮಾಡುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ಶಿವಸಂಚಾರದ ಮೂಲ ಆಶಯ ಎಂದು ಸಾಣೇಹಳ್ಳಿ ಮಠಾಧೀಶ ಶ್ರೀ ಡಾ|| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಕ್ಯಾತನಬೀಡು ಪ್ರತಿಷ್ಠಾನ, ಸೂರಿ ಸಾಂಸ್ಕøತಿಕ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮೂರು ದಿನಗಳ ಕಾಲ ನಡೆದ ಶಿವಸಂಚಾರ 2018 ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಬುಧವಾರ ಅವರು ಆಶೀರ್ವಚನ ನೀಡಿದರು.ಕಳೆದ 22 ವರ್ಷಗಳಿಂದ ಶಿವಸಂಚಾರದ ಕಲಾವಿದರು ನಾಟಕಗಳ ಮೂಲಕ ಸಮಾಜದಲ್ಲಿರುವ ಅನಿಷ್ಠಗಳನ್ನು ನಿವಾರಣೆ ಮಾಡುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ, ಯಾರು ಒಪ್ಪಲಿ ಅಥವಾ ಬಿಡಲಿ ಸಮಾಜಕ್ಕೆ ಸತ್ಯವನ್ನು ಮತ್ತು ತತ್ವವನ್ನು ಹೇಳುವ ಕೆಲಸವನ್ನು ಶಿವಸಂಚಾರ ತಪ್ಪದೇ ಮಾಡುತ್ತಿದೆ ಎಂದರು.
ರಂಗಭೂಮಿ ಜೀವಂತಿಕೆಯ ಸಂಕೇತ, ಅದು ಸಮಾಜಕ್ಕೆ ಹಿಡಿದ ಕನ್ನಡಿ, ನಾಟಕಗಳು ಮನಸ್ಸನ್ನು ವಿಕಾಸಗೊಳಿಸುತ್ತವೆ ಆದರೆ ಇಂದಿನ ದಿನಮಾನಗಳಲ್ಲಿ ನಾಟಕಗಳೂ ಕೂಡ ಜನರಲ್ಲಿ ಕೀಳಭಿರುಚಿಯನ್ನು ಬಿತ್ತುತ್ತಿವೆ ಹಾಗಾಗಿ ಪ್ರೇಕ್ಷಕರ ಕೊರತೆ ಉಂಟಾಗುತ್ತಿದೆ ಎಂದು ವಿಷಾದಿಸಿದರು.ನಾಟಕಗಳ ಮೂಲ ಆಶಯ ಜನರಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ಅವರಲ್ಲಿ ಸುಜ್ಞಾನವನ್ನು ಮೂಡಿಸುವುದು, ಸಮಾಜದ ಮುಖಕ್ಕೆ ಕನ್ನಡಿ ಹಿಡಿಯುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಶಿವಸಂಚಾರ ತಂಡ 12ನೇ ಶತಮಾನದ ಶರಣರ ಆಶಯಗಳನ್ನು ನಾಟಕಗಳ ಮೂಲಕ ಈಡೇರಿಸುತ್ತಿದೆ, ಸಮಾಜದಲ್ಲಿರುವ ವರ್ಗ ಭೇದ, ಲಿಂಗ ಭೇದ ಹಾಗೂ ತಾರತಮ್ಯಗಳನ್ನು ತೊಡೆದು ಹಾಕಲು ಶ್ರಮಿಸುತ್ತಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಸಿ.ರಮೇಶ್ ಅಂತಿಮ ದಿನದ ನಾಟಕಕ್ಕೆ ಚಾಲನೆ ನೀಡಿದರು, ಸಾಹಿತಿ ಬೆಳವಾಡಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇತ್ತೀಚೆಗೆ ನಿಧನರಾದ ನರಬಲಿ ನಾಟಕದ ರಚನಾಕಾರ ಜ.ಹೋ.ನಾರಾಯಣ ಸ್ವಾಮಿ ಅವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಸಿಪಿಐ ಮುಖಂಡ ಹೆಚ್.ಎಂ.ರೇಣುಕಾರಾಧ್ಯ, ಕಾಂಗ್ರೇಸ್ ಮುಖಂಡ ಎಂ.ಸಿ.ಶಿವಾನಂದ ಸ್ವಾಮಿ, ಸಾಹಿತಿ ಹೆಚ್.ಎಂ.ನಾಗರಾಜ ರಾವ್, ಡಾ|| ಸಂತೋಷ್ ನೇತಾ, ಮಹಡಿ ಮನೆ ಸತೀಶ್, ಸೂರಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಪ್ರಭು, ಎಸ್.ಎಂ.ಲೋಕೇಶ್ ಉಪಸ್ಥಿತರಿದ್ದರು.ಸೋಮಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು, ಕ್ಯಾತನಬೀಡು ಪ್ರತಿಷ್ಠಾನದ ಕಾರ್ಯದರ್ಶಿ ರವೀಶ್ ಬಸಪ್ಪ ಸ್ವಾಗತಿಸಿದರು, ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕ ಡಿ.ಎಂ.ಮಂಜುನಾಥಸ್ವಾಮಿ ವಂದಿಸಿದರು.