ಶಿವಮೊಗ್ಗ: ಪ್ರೇಮಿಗಳಿಬ್ಬರು ಒಟ್ಟಿಗೆ ಇದ್ದ ವಿಡಿಯೋ ಇಟ್ಟುಕೊಂಡು ಕಿಡಿಗೇಡಿಗಳು ಬ್ಲಾಕ್ ಮೇಲ್ ಮಾಡಿದ್ದು, ಬೇಸತ್ತ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಲು ಮುಂದಾಗಿ ಯುವಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿ ಹೊಸಹಳ್ಳಿಯ ಯುವತಿ ಪ್ರೀತಿಸುತ್ತಿದ್ದರು. ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದಾಗ ಕೆಲ ಯುವಕರು ವಿಡಿಯೋ ಮಾಡಿದ್ದಾರೆ. ನಂತರ ಆ ಯುವಕರು ಸಂಜಯ್ ಗೆ ಪದೇ ಪದೇ ಫೋನ್ ಮಾಡಿ 5 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಹಾಗೂ ಹಣವನ್ನು ಕೊಡದಿದ್ದರೆ ವಿಡೀಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಕಿಡಿಗೇಡಿಗಳಿಗೆ ಹಣ ನೀಡಲಾಗದೇ ಇಬ್ಬರು ಪ್ರೇಮಿಗಳು ನಿನ್ನೆ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಯುವಕ ಮೃತಪಟ್ಟಿದ್ದು, ಯುವತಿ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










