ಚಿಕ್ಕಮಗಳೂರು: ಯುವಜನತೆ ಸೇವಾ ಮನೋಭಾವನೆಯನ್ನು ಮೈಗೂಡಿಸಿ ಕೊಂಡರೆ ಮಾತ್ರ ಸುಖಿ ಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ತಾಲ್ಲೂಕಿನ ಇಂದಿರಾ ನಗರದಲ್ಲಿ (ಎನ್.ಎಂ.ಡಿ.ಸಿ) ಶುಕ್ರವಾರ ನಡೆದ ನಗರದ ಸಂತ ಜೋಸೇಫರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.
ಸೇವೆಯಿಂದ ಮನುಷ್ಯನ ಬದುಕು ಸಾರ್ಥಕವಾಗುತ್ತದೆ, ನೊಂದವರು, ಅಸಹಾಯಕರು ಮತ್ತು ದೀನದುರ್ಬಲರಿಗೆ ನೆರವಿನ ಹಸ್ತ ಚಾಚಿದರೆ ಅವರ ಬದುಕೂ ಹಸನಾಗುತ್ತದೆ ಎಂದ ಅವರು ಯುವಜನತೆ ಇದನ್ನು ಮನಗಾಣಬೇಕು, ಸಮಾಜ ಸೇವೆಯನ್ನು ತಮ್ಮ ಉಸಿರಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಮಾತನಾಡಿ ಯುವಜನತೆ ಶಿಕ್ಷಣವಂತರಾಗುವುದರ ಜೊತೆಗೆ ಸಮಾಜ ಸೇವಕರಾಗಿಯೂ ರೂಪುಗೊಳ್ಳಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಕಾರ್ಡೋಜಾ ಶಿಬಿರಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು, ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ವಿದ್ಯಾರ್ಥಿಗಳು ಸಾಮೂಹಿಕ ಶ್ರಮದಾನದ ಮೂಲಕ ಗ್ರಾಮದ ಮುಖ್ಯ ರಸ್ತೆಯನ್ನು ಸ್ವಚ್ಚಗೊಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ದಾಕ್ಷಾಯಿಣಿ ಪೂರ್ಣೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಧೃವೇಶ್, ಎಐಟಿ ಪ್ರಾಂಶುಪಾಲ ಪ್ರಕಾಶ್ ರಾವ್, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಎಂ.ಎ.ವಿನಯ್ ಕುಮಾರ್, ಎಸ್.ಬಿ.ಚಂದ್ರಶೇಖರ್ ಉಪಸ್ಥಿತರಿದ್ದರು.










