ಬ್ರಾಹ್ಮಣ ಸಮುದಾಯ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದರೆ ಆ ವರ್ಗದ ಜನ ಒಗ್ಗೂಡಿ ಸಂಘಟಿತರಾಗಬೇಕು : ಮ.ಸ.ನಂಜುಂಡಸ್ವಾಮಿ…

258
firstsuddi

ಚಿಕ್ಕಮಗಳೂರು: ಆಧುನೀಕರಣ ಮತ್ತು ಜಾಗತೀಕರಣದಿಂದಾಗಿ ಬದಲಾಗಿರುವ ಇಂದಿನ ಸನ್ನಿವೇಶದಲ್ಲಿ ಬ್ರಾಹ್ಮಣ ಸಮುದಾಯ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದರೆ ಆ ವರ್ಗದ ಜನ ಒಗ್ಗೂಡಿ ಸಂಘಟಿತರಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ವಕ್ತಾರ ಮ.ಸ.ನಂಜುಂಡಸ್ವಾಮಿ ಸಲಹೆ ಮಾಡಿದರು.
ನಗರದ ಎಂಇಎಸ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ವಿಪ್ರನೌಕರರ ಕ್ಷೇಮಾಭ್ಯುದಯ ಸಂಘದ ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧುನೀಕರಣ ಮತ್ತು ಜಾಗತೀಕರಣದಿಂದಾಗಿ ಇಂದು ಬ್ರಾಹ್ಮಣ ಸಮುದಾಯ ಅನೇಕ ಸವಾಲುಗಳನ್ನು ಎದುರಿಸುತ್ತಿದೆ, ಬದಲಾದ ಸನ್ನಿವೇಶದಲ್ಲಿ ಆ ವರ್ಗದ ಅಸ್ಥಿತ್ವಕ್ಕೆ ಸಂಚಕಾರ ಬಂದಿದೆ ಎಂದ ಅವರು ವಿಪ್ರ ಜನ ಈಗಲಾದರೂ ಎಚ್ಚೆತ್ತು ತಮ್ಮಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮತ್ತು ವೈರುಧ್ಯಗಳನ್ನು ಬದಿಗೊತ್ತಿ ಒಂದಾದರೆ ಮಾತ್ರ ಅವರ ಏಳಿಗೆ ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ ಜಾತ್ಯಾತೀತವಾಗಿ ಪ್ರತಿಭಾ ಪುರಸ್ಕಾರವನ್ನು ಮಾಡುತ್ತಿರುವ ಏಕೈಕ ಸಂಸ್ಥೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಎಂದ ಅವರು ಸಂಸ್ಥೆಯ ರಾಜ್ಯ ಘಟಕ ಪ್ರತಿವರ್ಷ ಎಲ್ಲಾ ಜಾತಿ, ಮತ ಮತ್ತು ಧರ್ಮದ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ಮಾಡುತ್ತಿವೆ ಎಂದು ತಿಳಿಸಿದರು.
ಜಿಲ್ಲಾ ಘಟಕಗಳೂ ಇದನ್ನೇ ಅನುಸರಿಸಬೇಕು, ಎಲ್ಲಾ ವಿಪ್ರ ಸಂಘಟನೆಗಳೂ ಒಗ್ಗೂಡಿ ಒಂದೇ ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನವನ್ನು ವಿತರಿಸಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎ.ವಿ.ಅನಂತರಾಮಯ್ಯ ತಮ್ಮ ಸಂಸ್ಥೆ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ಸಮುದಾಯದ ಸಾಧಕರಿಗೆ ಸನ್ಮಾನದಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ, ವಿಪ್ರರನ್ನು ಸಂಘಟಿಸಲು ದುಡಿಯುತ್ತಿದೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್‍ನ ಸಹಾಯಕ ಮುಖ್ಯ ಪ್ರಬಂಧಕ ಎ.ಉಲ್ಲಾಸ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಉನ್ನತ ವ್ಯಾಸಂಗದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು, ವಿದ್ಯಾರ್ಥಿ ವೇತನ ವಿತರಿಸಲಾಯಿತು.
ನಿವೃತ್ತ ನೌಕರರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸಮುದಾಯದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು, ಸಂಘದಿಂದ ಹೊರತರಲಾದ ನೂತನ ವರ್ಷದ ಕ್ಯಾಲೆಂಡರ್‍ನ್ನು ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ವಿಪ್ರ ನೌಕರರ ಕ್ಷೇಮಾಭ್ಯುದಯ ಸಂಘದ ಅಧ್ಯಕ್ಷ ಎ.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು, ಕೊಪ್ಪ ಸಂಘದ ಗೌರವಾಧ್ಯಕ್ಷ ಹೆಚ್.ಎಸ್.ಗಣಪತಿ, ಬ್ರಾಹ್ಮಣ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಅಶ್ವಿನ್, ಅನಂತ್, ಉದ್ಯಮಿ ವೈ.ಟಿ.ನಾರಾಯಣ, ಪದ್ಮಾ ಶಿವಶಂಕರ್, ಸಂಘದ ಖಜಾಂಚಿ, ಎ.ಎಸ್.ಶ್ರೀಧರ್ ಉಪಸ್ಥಿತರಿದ್ದರು.
ಸುಮಾ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು, ಕೆ.ಎಸ್. ನರಸಿಂಹಮೂರ್ತಿ ಸ್ವಾಗತಿಸಿದರು, ಎಂ.ವಿ.ಪ್ರಕಾಶ್ ವಂದಿಸಿದರು.