ಪೌರ ಕಾರ್ಮಿಕರ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ರೂಪಿಸಲಾಗುವುದು: ಸಿ.ಟಿ.ರವಿ…

218
firstsuddi

ಚಿಕ್ಕಮಗಳೂರು: ನಗರದ ಉಪ್ಪಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಪೌರ ಕಾರ್ಮಿಕರ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ರೂಪಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಗೃಹಭಾಗ್ಯ ಯೋಜನೆಯಡಿ ಉಪ್ಪಳ್ಳಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ 5.48 ಕೋಟಿ ರೂ ವೆಚ್ಚದ ಪೌರ ಕಾರ್ಮಿಕರ 73 ಮನೆಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರಿಗೆ ಸೂರು ಒದಗಿಸಿ ಕೊಡುವ ನಿಟ್ಟಿನಲ್ಲಿ ಈ ಮನೆಗಳನ್ನು ನಿರ್ಮಿಸಲಾಗುತ್ತ್ತಿದೆ, ನಿರ್ಮಾಣದ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಸೂಚಿಸಲಾಗಿದೆ ಎಂದರು.
ಉತ್ತಮ ರಸ್ತೆ, ಬೀದಿ ದೀಪ, ಕುಡಿಯುವ ನೀರು, ಉದ್ಯಾನವನ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸುಸಜ್ಜಿತ ಬಡಾವಣೆಯನ್ನಾಗಿ ಮಾಡಲಾಗುವುದು, ಈ ಬಡಾವಣೆಯಲ್ಲಿ ನಿವೇಶನ ದೊರೆಯದ ಪೌರ ಕಾರ್ಮಿಕರಿಗೆ ಮುಂದಿನ ಹಂತದ ಬಡಾವಣೆಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ನೂತನ ಬಡಾವಣೆಗೆ ಪಂಡಿತ್ ದೀನದಯಾಳ್ ಬಡಾವಣೆಯೆಂದು ನಾಮಕರಣ ಮಾಡುವಂತೆ ಸೂಚಿಸಿದರು.
ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಮಾತನಾಡಿ ಈ ಬಡಾವಣೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ನಗರಸಭೆಯಿಂದ ಪೌರ ಕಾರ್ಮಿಕರಿಗೆ ನಿವೇಶನಗಳನ್ನು ನೀಡಲಾಗಿತ್ತು ಎಂದು ಹೇಳಿದರು.
ಪೌರಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆಯಿಂದ ಬಡಾವಣೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದು ತಿಳಿಸಿದರು.
ಪೌರ ಕಾರ್ಮಿಕರು ಮತ್ತು ಪೌರ ಕಾರ್ಮಿಕರ ಸಂಘದಿಂದ ಶಾಸಕ ಸಿ.ಟಿ. ರವಿ ಅವರನ್ನು ಸನ್ಮಾನಿಸಲಾಯಿತು.
ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್. ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ, ಸದಸ್ಯರಾದ ಟಿ.ರಾಜಶೇಖರ್, ಸುರೇಖಾ ಸಂಪತ್, ಪೌರಾಯುಕ್ತೆ ತುಷಾರಮಣಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಅಣ್ಣಯ್ಯ, ಉಪಾಧ್ಯಕ್ಷ ಸಿ.ಬಿ.ನಾಗರಾಜ್, ಪತ್ರಕರ್ತ ಪಿ.ರಾಜೇಶ್, ಸ್ಥಳೀಯ ಮುಖಂಡರಾದ ರಾಜೇಶ್, ಗಣೇಶ್ ಹಾಜರಿದ್ದರು.