ಇಂದಿನ ಯುವಪೀಳಿಗೆ ದೇಶಭಕ್ತಿ, ರಾಷ್ಟ್ರಪೇಮ ಮತ್ತು ಸೇವಾಮನೋಭಾವವನ್ನು ಬೆಳೆಸಿಕೊಳ್ಳಬೇಕು : ಉಮಾ ಐ.ಬಿ. ಶಂಕರ್…

338
firstsuddi

ಚಿಕ್ಕಮಗಳೂರು: ಇಂದಿನ ಯುವಪೀಳಿಗೆ ದೇಶಭಕ್ತಿ, ರಾಷ್ಟ್ರಪೇಮ ಮತ್ತು ಸೇವಾಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಭಾರತ ಸೇವಾದಳ ಮಹಿಳಾ ವಿಭಾಗದ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮಾ ಐ.ಬಿ. ಶಂಕರ್ ಸಲಹೆ ಮಾಡಿದರು.
ನಗರದ ಆಜಾದ್ ಪಾರ್ಕ್ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ಅಯೋಜಿಸಿರುವ ಭಾರತ ಸೇವಾದಳ ಸಪ್ತಾಹಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇಶ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ, ಶೈಕ್ಷಣಿಕ ಮತ್ತು ವೈಜ್ಞಾನಿಕವಾಗಿ ಬಹಳಷ್ಟು ಪ್ರಗತಿಯನ್ನು ಸಾಧಿಸಿದೆ ಆದರೆ ಆಧುನೀಕರಣ ಮತ್ತು ಜಾಗತೀಕರಣದಿಂದಾಗಿ ನಮ್ಮ ಯುವಜನತೆಯಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ ಮತ್ತು ಸೇವಾಮನೋಭಾವ ಕಾಣೆಯಾಗುತ್ತಿದೆ ಎಂದು ವಿಷಾದಿಸಿದರು.
ಈ ಬೆಳವಣಿಗೆ ರಾಷ್ಟ್ರದ ಅಭಿವೃದ್ದಿಗೆ ಮಾರಕವಾಗುತ್ತಿದೆ ಎಂದ ಅವರು ಶಿಕ್ಷಕರು ಮತ್ತು ಪೋಷಕರು ಈಗಲಾದರೂ ಎಚ್ಚೆತ್ತು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ ಮತ್ತು ಸೇವಾಮನೋಭಾವವನ್ನು ಬೆಳೆಸಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರಪೇಮ ಮತ್ತು ಸೇವಾಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಸೇವಾದಳ ಸಪ್ತಾಹವನ್ನು ಪ್ರತಿವರ್ಷ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಪ್ತಾಹದ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು, ವಿಜೇತರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.
ಮುಖ್ಯಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಸೇವಾದಳದ ಶಿಕ್ಷಕರಾದ ವೇದಾವತಿ, ಸುಭದ್ರಮ್ಮ, ರಮ್ಯಾ, ತಿಪ್ಪೇರುದ್ರಪ್ಪ, ಸಾವಿತ್ರಮ್ಮ ಉಪಸ್ಥಿತರಿದ್ದರು. ಸಮಾರಂಭದ ನಂತರ ನಡೆದ ಸ್ಪರ್ಧೆಯಲ್ಲಿ 16 ಶಾಲೆಗಳ 218 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.