ಚಿಕ್ಕಮಗಳೂರು: ಶ್ರೀಮಾತೆ ಶಾರದಾದೇವಿಯವರ ಜನ್ಮದಿನಾಚರಣೆ ಪ್ರಯುಕ್ತ ಶಾರದಾ ಮಠದಲ್ಲಿ ವಿಶೇಷ ಪೂಜೆ…

265
firstsuddi

ಚಿಕ್ಕಮಗಳೂರು: ಭಗವಾನ್ ಶ್ರೀ ರಾಮಕೃಷ್ಣಪರಮಹಂಸರ ಪತ್ನಿ ಶ್ರೀಮಾತೆ ಶಾರದಾದೇವಿಯವರ ಜನ್ಮದಿನಾಚರಣೆ ಇಲ್ಲಿನ ಆದಿಶಕ್ತಿನಗರದ ಶಾರದಾ ಮಠದಲ್ಲಿ ಶುಕ್ರವಾರ ಶ್ರದ್ದಾಭಕ್ತಿಯಿಂದ ನಡೆಯಿತು.
ಜನ್ಮದಿನದ ಪ್ರಯುಕ್ತ ಬೆಳಿಗ್ಗೆ ಮಂಗಳಾರತಿ, ವೇದಘೋಷ, ವಿಶೇಷ ಪೂಜೆ, ಲಲಿತಾ ಸಹಸ್ರನಾಮ ಪಾರಾಯಣ. ಶ್ರೀ ಶಾರದಾ ಮೂಲ ಮಂತ್ರ ಹೋಮ ಜರುಗಿತು.
ಭಕ್ತರಿಂದ ಸಾಮೂಹಿಕ ಭಜನೆ, ಸ್ತ್ರೋತ್ರ ಪಠಣ, ನಾಮ ಸಂಕೀರ್ತನೆ ನಡೆದವು, ಹೋಮದ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಇದೇ ವೇಳೆ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಮಠದ ಅಧ್ಯಕ್ಷೆ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ ತಮ್ಮ ಸಾಧನೆ, ತ್ಯಾಗ ಮತ್ತು ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಆಧ್ಯಾತ್ಮಿಕವಾಗಿ ಬೆಳೆಸಿದ ಮಹಾನ್ ಶಕ್ತಿ ಶ್ರೀ ಶಾರದಾದೇವಿಯವರು ಎಂದರು.
ಇಂದಿನ ಪೀಳಿಗೆಗೆ ಶ್ರೀಮಾತೆ ಶ್ರೀ ಶಾರದಾದೇವಿಯವರ ಬದುಕು, ತತ್ವ, ಸಂದೇಶ ಮತ್ತು ಆದರ್ಶಗಳು ದಾರಿ ದೀಪವಾಗಬೇಕು ಎಲ್ಲರೂ ಅವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉಪನ್ಯಾಸಕರಾದ ಲತಾ ಮತ್ತು ಪ್ರಿಯಾ ಅವರು ಶ್ರೀಮಾತೆ ಶ್ರೀಶಾರದಾ ದೇವಿಯವರ ಬದುಕು ಮತ್ತು ಸಂದೇಶಗಳ ಕುರಿತು ಪ್ರವಚನ ನೀಡಿದರು.
ಶ್ರೀ ಪ್ರವ್ರಾಜಿಕಾ ಅಜಿತಪ್ರಾಣಾ, ಶಿವಪ್ರಿಯ ಪ್ರಾಣಾ ಮಾತಾಜಿ, ಬ್ರಹ್ಮಚಾರಿಣಿ ಡಾ|| ಅನ್ನಪೂರ್ಣ ಮತ್ತು ಲಕ್ಷ್ಮೀ ಉಪಸ್ಥಿತರಿದ್ದರು.