ಚಿಕ್ಕಮಗಳೂರು:ಆಧುನೀಕರಣ ಮತ್ತು ಜಾಗತೀಕರಣದಲ್ಲಿ ನಾವು ಕಳೆದು ಹೋಗಬಾರದು, ನಾವೂ ಉಳಿದು ನಮ್ಮ ಜಾನಪದವನ್ನೂ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಬಸಪ್ಪ ಸಲಹೆ ಮಾಡಿದರು.
ಜಿಲ್ಲಾ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಮತ್ತು ಹೋಬಳಿ ಘಟಕಗಳ ಆಶ್ರಯದಲ್ಲಿ ಆಯೋಜಿಸಿರುವ ಒಂದು ತಿಂಗಳ ಕಾಲದ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮಕ್ಕೆ ನಗರದ ಎಸ್.ಟಿ.ಜೆ ಕಾಲೇಜಿನಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದವೆಂದರೆ ಬರೀ ಹಾಡು ಅಥವಾ ಕುಣಿತವಲ್ಲ, ಅದೊಂದು ಉದಾತ್ತ ಸಂಸ್ಕøತಿ ಮತ್ತು ಬದುಕು, ಅದು ಕಣ್ಮರೆಯಾದರೆ ನಮ್ಮ ಜೀವನ ಬರಡಾಗುತ್ತದೆ ಎಂದು ಎಚ್ಚರಿಸಿದರು.
ಜಾನಪದ ಮತ್ತು ಮಹಿಳೆ ವಿಷಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಿ.ತಿಪ್ಪೇರುದ್ರಪ್ಪ ಜಾನಪದ ಸಂಸ್ಕøತಿಯ ನಿಜವಾದ ವಾರಸುದಾರರು ಗ್ರಾಮೀಣ ಮಹಿಳೆಯರು ಅವರಿಂದಲೇ ಜಾನಪದ ಹುಟ್ಟಿ ಬೆಳೆದಿದೆ ಎಂದರು.
ಆದರೆ ಇಂದು ಕಂಪ್ಯೂಟರ್, ಮೊಬೈಲ್ ಮತ್ತು ಟಿ.ವಿ ಯನ್ನು ಭದ್ರವಾಗಿ ಹಿಡಿದುಕೊಂಡಿರುವ ಮಹಿಳೆಯರು ನಮ್ಮ ಸಂಸ್ಕøತಿಯ ತಾಯಿ ಬೇರಾದ ಜಾನಪದವನ್ನು ಮರೆಯುತ್ತಿದ್ದಾರೆ, ಇದರಿಂದಾಗಿ ಕೌಟುಂಬಿಕ ಸಂಬಂಧಗಳು, ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದಿಸಿದರು.
ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗಧೀಶ್ ಮಾತನಾಡಿ ಜಾನಪದವನ್ನು ಉಳಿಸಿ ಬೆಳೆಸುವುದು ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಆಧುನೀಕರಣ ಮತ್ತು ಜಾಗತೀಕರಣದಿಂದ ತೆರೆಮರೆಗೆ ಸರಿಯುತ್ತಿರುವ ಜಾನಪದ ಸಾಹಿತ್ಯ, ಕಲೆ ಮತ್ತು ಸಂಸ್ಕøತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಿ ಆ ಮೂಲಕ ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಡೀ ತಿಂಗಳು ಪರಿಷತ್ತಿನಿಂದ ಜಿಲ್ಲೆಯ ವಿವಿಧೆಡೆ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ|| ಜೆ.ಕೆ.ಭಾರತಿ ಅಧ್ಯಕ್ಷತೆ ವಹಿಸಿದ್ದರು, ಲೇಖಕಿ ವಾಣಿ ಚಂದ್ರಯ್ಯ ನಾಯ್ಡು ಉಪಸ್ಥಿತರಿದ್ದರು.
ಉಪನ್ಯಾಸಕ ನಾಗೇಶ್ವರ್ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಭೂಮಿಕ ಕಾರ್ಯಕ್ರಮವನ್ನು ನಿರೂಪಿಸಿದರು, ಎಂ.ನೇಹಾ ವಂದಿಸಿದರು.










