- ರಾಘವೇಂದ್ರ ಕೆಸವಳಲು
ಮಲೆನಾಡು ತನ್ನ ನಿಸರ್ಗದತ್ತ ಸೌಂದರ್ಯದೊಂದಿಗೆ ಹಲವಾರು ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಅದರಂತೆ ಇಲ್ಲಿಗೆ ಬರುವ ಪ್ರವಾಸಿಗರು ಪ್ರಕೃತಿಯ ರಸದೌತಣ ದೊಂದಿಗೆ ಇಲ್ಲಿಯ ವಿಶೇಷ ಬಗೆಯ ಆಹಾರ ಪದಾರ್ಥಗಳನ್ನು ಸವಿಯುವುದು ಸರ್ವೇ ಸಾಮಾನ್ಯ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಾಸ್ಥಳಗಳಿಗೆ ಹೋಗುವಾಗ ಪ್ರವಾಸಿಗರು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಕಾಫಿ ತಿಂಡಿಗಳಿಗಾಗಿ ತಮ್ಮ ವಾಹನಗಳನ್ನು ನಿಲ್ಲಿಸುವುದುಂಟು. ಸ್ಥಳಕ್ಕೆ ಪರಿಚಿತ ಪ್ರವಾಸಿಗರಾದರೆ ಆಯ್ಕೆಗೆ ಅವಕಾಶವಿಲ್ಲವೇನೋ ಎಂಬಂತೆ ಮೊದಲು ಆರ್ಡರ್ ಮಾಡುವುದು ನೀರುದೋಸೆಗಳನ್ನು.

ನೀರು ದೋಸೆ ಹೆಸರೇ ಸೂಚಿಸುವಂತೆ ಮಾಡಲು ಹಾಗೂ ನೋಡಲು ಬಲು ಸರಳ ಆದರೆ ರುಚಿ ಮಾತ್ರ ಅಪಾರ. ಕೊಟ್ಟಿಗೆಹಾರದ ಪ್ರತಿ ಅಂಗಡಿ ಹಾಗೂ ಹೋಟೆಲ್ ಗಳ ಮುಂಭಾಗದಲ್ಲಿ ನೀರುದೋಸೆ ಲಭ್ಯ. ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿದಾಗ ತಯಾರಾಗುವ ತೆಳುವಾದ ಹಿಟ್ಟನ್ನು ಕಾದ ಕಾವಲಿಯ ಮೇಲೆ ತೆಳುವಾಗಿ ಹರಡಿದರೆ ನೀರು ದೋಸೆ ರೆಡಿ. ಇನ್ನು ಬಿಸಿ ಬಿಸಿಯಾದ ನೀರುದೋಸೆಗೆ ಅತ್ಯದ್ಭುತವಾದ ಕಾಂಬಿನೇಷನ್ ಮೀನು ಸಾರು. ಉಳಿದಂತೆ ಇತರ ಮಾಂಸದ ಖಾದ್ಯಗಳೊಂದಿಗೂ ಕೂಡ ನೀರುದೋಸೆ ಉತ್ತಮ ರುಚಿ ಕೊಡುತ್ತದೆ. ಉಳಿದಂತೆ ಸಸ್ಯಾಹಾರಿಗಳೂ ಕಾಯಿ ಚಟ್ನಿಯೊಂದಿಗೆ ನೀರುದೋಸೆಯನ್ನು ಸವಿಯಬಹುದು.
ಮಲೆನಾಡಿನ ಪ್ರತಿ ಮನೆಯಲ್ಲೂ ತಯಾರಾಗುವ ಸರಳವಾದ ನೀರುದೋಸೆ ಕರ್ನಾಟಕದಲ್ಲಷ್ಟೆ ಅಲ್ಲ ದೇಶದಾದ್ಯಂತ ಹೆಸರುವಾಸಿ. ಇನ್ನು ಮಳೆಗಾಲವೇ ಇರಲಿ ಚಳಿಗಾಲದ ಚುಮುಗುಟ್ಟುವ ಚಳಿಯೇ ಇರಲಿ ಪ್ರಕೃತಿ ಸೌಂದರ್ಯದ ನಡುವೆ ಇರುವ ಕೊಟ್ಟಿಗೆಹಾರದಲ್ಲಿ ಒಮ್ಮೆ ನೀರುದೋಸೆ ತಿನ್ನುವ ಪ್ರವಾಸಿಗರು ಮತ್ತೊಮ್ಮೆ ಅದರ ಸೆಳೆತಕ್ಕೆ ಸುಲುಕಿ ನೀರುದೋಸೆಯ ಖಾಯಂ ಗಿರಾಕಿಗಳಾಗುವುದುಂಟು. ಹಲವಾರು ನಟರು, ಅಧಿಕಾರಿಗಳು, ರಾಜಕಾರಣಿಗಳು, ಲೇಖಕರು, ಕೂಡ ಕೊಟ್ಟಿಗೆಹಾರದ ನೀರುದೋಸೆ ಪ್ರೇಮಿಗಳು ಇದಕ್ಕೆ ನಿದರ್ಶನ ಖ್ಯಾತ ಲೇಖಕ ರವಿಬೆಳಗೆರೆಯವರು 90ರ ದಶಕಗಳಲ್ಲಿ ಕೊಟ್ಟಿಗೆಹಾರದ ನೀರುದೋಸೆ ಹಾಗೂ ಕೋಳಿಮಾಂಸದ ಸಾರು ತಿನ್ನಲು ಆಗಾಗ ಬರುತ್ತಿದ್ದುದಾಗಿ ಹಾಗೂ ಆ ರುಚಿ ಅತ್ಯದ್ಭುತವೆನ್ನುವುದನ್ನು ತಮ್ಮ ಹಲವಾರು ಬರವಣಿಗೆಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ವೀಕೆಂಡ್ ಗಳಲ್ಲಿ ಹಾಸನ ಹಾಗೂ ಬೆಂಗಳೂರಿನ ಹಲವಾರು ಗ್ರಾಹಕರು ಇಲ್ಲಿನ ನೀರುದೋಸೆ ಸವಿಯುವ ಸಲುವಾಗಿಯೇ ಒಂದು ಮನದಣಿಯೆ ತಿಂದು ತಮ್ಮೂರಿಗೆ ಹಿಂದಿರುಗುತ್ತಾರೆ.
ಇಂದಿನ ಹತ್ತು ಹಲವು ಆಧುನಿಕ ಆಹಾರಗಳ ನಡುವೆ ತನ್ನದೇ ಛಾಪನ್ನು ಉಳಿಸಿಕೊಂಡಿರುವ ಹಲವಾರು ತಿನಿಸುಗಳಲ್ಲಿ ನೀರುದೋಸೆ ಕೂಡ ಒಂದು. ನಿರಾಭರಣ ಸುಂದರಿಯಂತೆ ತೆಳ್ಳಗೆ ಬೆಳ್ಳಗಿನ ನೀರುದೋಸೆ ಒಮ್ಮೆ ಸವಿದವರನ್ನು ಮತ್ತೊಮ್ಮೆ ತನ್ನಲ್ಲಿಗೆ ಸೆಳೆಯುವುದು ಖಂಡಿತ.










