ಹಳಿ ತಪ್ಪಿದ ಹೋಂ ಸ್ಟೇ ಪರಿಕಲ್ಪನೆ, ಮುಂದೆ ಎದುರಾಗಲಿವೆ ಭೀಕರ ಸಮಸ್ಯೆಗಳು !

733

ರಾಘವೇಂದ್ರ ಕೆಸವಳಲು

ಬೆಡ್ ಅಂಡ್ ಬ್ರೇಕ್ ಫಾಸ್ಟ್ (Bed & Breakfast) ಎಂಬ ಪರಿಕಲ್ಪನೆಯೊಂದಿಗೆ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಅಸ್ತಿತ್ವಕ್ಕೆ ಬಂದ ಹೋಂ ಸ್ಟೇ ಗಳು ಇಂದು ಮಲೆನಾಡಿನ ಎಲ್ಲರಿಗೂ ಚಿರಪರಿಚಿತ. ‘ಹೋಂ ಸ್ಟೇ ‘ ಹೆಸರೇ ಸೂಚಿಸುವಂತೆ ಇದು ಭೇಟಿ ನೀಡುವ ಪ್ರವಾಸಿ ಅತಿಥಿಗಳಿಗೆ ಆ ಪ್ರದೇಶದ ಸ್ಥಳೀಯ  ವಾಸಿಗಳೇ ತಮ್ಮ ಮನೆ ಅಥವಾ ಅದಕ್ಕೆ ಹೊಂದಿಕೊಂಡಿರುವ ಕೊಠಡಿಗಳಲ್ಲಿ ತಂಗುವ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡುವುದು. ತುಂಬಾ ಸರಳವಾದ ಪರಿಕಲ್ಪನೆಯೊಂದಿಗೆ ಮಲೆನಾಡಿಗೆ  ಲಗ್ಗೆ ಇಟ್ಟ ಈ ಪದ್ಧತಿ ಎಷ್ಟೋ ಕುಟುಂಬಗಳಿಗೆ ಪೂರಕ ಆದಾಯವಾಗಿ ಪರಿಣಮಿಸಿದರೆ ಶ್ರೀಮಂತರಿಗೆ ಇದು ವಾರಾಂತ್ಯದ ಲಾಭಗಳಿಗೆ ಹವ್ಯಾಸವಾಯಿತು.

ಯಾತ್ರಾ ಸ್ಥಳಗಳ ಕಾಡುಮೇಡು ಗಿರಿಶಿಖರ ಜಲಪಾತಗಳಿಗೆ ಹೆಸರು ವಾಸಿಯಾಗಿರುವ ಮಲೆನಾಡಿನಲ್ಲಿ ಪ್ರವಾಸಿಗರಿಗೇನೂ ಕೊರತೆಯಿಲ್ಲ. ಮನೆಯ ಸಾಂಪ್ರದಾಯಿಕ ಸೊಗಡಿನ ಆಥಿತ್ಯವೇ ಹೋಂ ಸ್ಟೇ ಮೂಲಾಳ .  ಆದರೆ ಬರುಬರುತ್ತಾ ಹೋಟೆಲ್ ಗಳನ್ನೂ ಮೀರಿಸುವ ಸವಲತ್ತುಗಳು ಹಾಗೂ ಆಡಂಬರವನ್ನು ನೀಡುವಲ್ಲಿ ಹೋಂ ಸ್ಟೇ ಗಳು ಪೈಪೋಟಿಗಿಳಿದಿರುವುದು ವಿಷಾದನೀಯ. ಕಾಫಿ ಹಾಗೂ ಅಡಿಕೆ ತೋಟಗಳ ನಡುವೆ ಸಾವಿರಾರು ಸಂಖ್ಯೆಯಲ್ಲಿ ತಲೆ ಎತ್ತಿರುವ ಹೋಂ ಸ್ಟೇಗಳನ್ನು, ಹೋಟೆಲ್ ಹಾಗೂ ಲಾಡ್ಜ್ ಗಳು ಎಂದು ಪರಿಗಣಿಸಲು ತೊಂದರೆಯಿಲ್ಲ.  ಏಕೆಂದರೆ ಲಾಭಗಳಿಕೆಯೊಂದೇ ಇವುಗಳ ಮೂಲ ಉದ್ದೇಶ.

ಸರ್ಕಾರದ ನಿಯಮಗಳಿಗನುಸಾರ ಹೋಂ ಸ್ಟೇ ಪರವಾನಗಿ ಪಡೆಯಬಯಸುವ ವ್ಯಕ್ತಿಗಳು ತಮ್ಮ ಸ್ವಂತ ಕಟ್ಟಡದಲ್ಲಿಯೇ ಅದನ್ನು ನಡೆಸಬೇಕು . ಹಾಗೂ ಆ ವ್ಯಕ್ತಿ ಮತ್ತು ಅವನ/ಅವಳ ಕುಟುಂಬದವರು ಅಲ್ಲಿಯೇ ನೆಲಸಿರಬೇಕು. ಆದರೆ ಖೇದಕರ ಸಂಗತಿ ಏನೆಂದರೆ ಇಂದು ಹಲವಾರು ಮಲೆನಾಡಿನ ಮನೆಗಳನ್ನು ಪರಊರಿನ ವ್ಯಕ್ತಿಗಳು ಲೀಸ್ ಗೆ ಪಡೆದು ಎಗ್ಗಿಲ್ಲದೆ ಹೋಂ ಸ್ಟೇ ಗಳನ್ನು ಅನೈತಿಕ ಚಟುವಟಿಕೆಗಳ ಆಶ್ರಯ ತಾಣಗಳನ್ನಾಗಿ ಮಾರ್ಪಡಿಸಿದ್ದಾರೆ. ಇನ್ನೂ  ಹಲವಷ್ಟು ಮಂದಿ ಕೋಟ್ಯಾಂತರ ರೂಪಾಯಿಗಳಿಗೆ ಇಲ್ಲಿನ ಭೂಮಿ ಖರೀದಿಸಿ ಆಡಂಬರ ಹಾಗೂ ಅತ್ಯಾಧುನಿಕ ಶೈಲಿಯ ಕಟ್ಟಡಗಳನ್ನು ನಿರ್ಮಿಸಿ ಹೋಂ ಸ್ಟೇ ಗಳನ್ನು ನಡೆಸುತ್ತಿರುವುದು ತಮ್ಮ ಪೂರಕ ಆದಾಯಕ್ಕಾಗಿ ಸರಳ ಹಾಗೂ ಅಚ್ಚುಕಟ್ಟಾದ ಹೋಂ ಸ್ಟೇ ಗಳನ್ನು ನಡೆಸುತ್ತಿದ್ದ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಹೀಗೆ ನಾಯಿಕೊಡೆಯಂತೆ ತಲೆ ಎತ್ತಿರುವ ಹೋಂ ಸ್ಟೇ ಗಳು  ಮುಖ್ಯವಾಗಿ ಸೆಳೆಯುತ್ತಿರುವುದು ಉದ್ದೇಶಿತ ಪ್ರವಾಸಿಗರನ್ನಲ್ಲ  ಮೋಜು ಮಾಡಲು ಬಯಸುವ ಯುವ ಜನರನ್ನು ಇದಕ್ಕೆ ನಿದರ್ಶನವೆಂಬಂತೆ ಈಗಾಗಲೇ ಸಾಕಷ್ಟು ಘಟನೆಗಳು ಮಲೆನಾಡಿಗರ ಮುಂದಿವೆ. ಅನೈತಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿರುವ ಹೋಂ ಸ್ಟೇ ಗಳು ಅಪರಾಧಗಳಿಗೆ ಎಡೆಮಾಡಿಕೊಟ್ಟರೆ ಆಶ್ಚರ್ಯವೇನಿಲ್ಲ. ಆದರೆ ಬಾಡಿಗೆ ಅಥವಾ ಲೀಸ್ ಗೆ ಪಡೆದ ಹೋಂ ಸ್ಟೇ ನಿರ್ವಾಹಕರು ಅದಕ್ಕೆ ಹೊಣೆಯಾಗುವುದಿಲ್ಲ ಹೊರತಾಗಿ ಸರ್ಕಾರದ ಕಾನೂನು ರೀತ್ಯಾ ಅದರ ಮಾಲೀಕರು ಅಪರಾಧದ ಹೊಣೆ ಹೊರಬೇಕಾಗುತ್ತದೆ.

ಇಷ್ಟು ಗಂಭೀರ ಸ್ಥಿತಿಗೆ ತಲುಪಿರುವ ಈ ದಂಧೆ ಪರಿಸರ ನಾಶಕ್ಕೂ ತನ್ನ ಕೊಡುಗೆಯನ್ನು ನೀಡಿದೆ. ನೆರೆಯ ಕೊಡಗು ಹಾಗೂ ಕೇರಳ ಕೂಡ ವಿಪರೀತ ಕಾಡು ನಾಶ ಹಾಗೂ ಭೂ ಸಂಪತ್ತಿನ ಶೋಷಣೆಯ ಫಲವಾಗಿ ಭೀಕರ ಪ್ರಕೃತಿ ವಿಕೋಪಕ್ಕೆ ಬಲಿಯಾಗಬೇಕಾಯಿತು. ನಮ್ಮಲ್ಲಿಯೂ ಕೂಡ ಇದು ಅವ್ಯಾಹತವಾಗಿ ನಡೆದಿದೆ. ಸ್ಥಳೀಯರ  ಪೂರಕಾ ದಾಯವನ್ನು ಕಸಿದ ಪರಊರಿನ ಜನರು ಇಲ್ಲಿನ ಪರಿಸರನಾಶವನ್ನು ನಿರಂತವಾಗಿ ನಡೆಸುತ್ತಿರುವುದು ದುರದೃಷ್ಟವೇ ಸರಿ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಇದಕ್ಕೆ ಕಡಿವಾಣ ಹಾಕದೇ ಹೋದರೆ ಪ್ರಕೃತಿ ಸಂಪತ್ತಿನಿಂದ ಪೊರೆಯಲ್ಪಡುತ್ತಿರುವ  ಮಲೆನಾಡಿನ ಜನತೆ ಹಿಂದೆಂದೂ ಕಂಡರಿಯದ ಸಮಸ್ಯೆಗಳನ್ನು ಅನುಭವಿಸಿ ಕಂಗಾಗುವ ದಿನ ದೂರ ಉಳಿದಿಲ್ಲ.