ಚಿಕ್ಕಮಗಳೂರು: ಎಸ್.ಎಸ್.ಎಲ್.ಸಿ ಸೇರಿದಂತೆ ವಿವಿಧ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಮನಶಾಸ್ತ್ರ ವಿಭಾಗದ ತಜ್ಞರ ತಂಡ ನಗರದ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಕುರಿತು ಇತ್ತೀಚೆಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿತು.
ಆಸ್ಪತ್ರೆಯ ಮನಶಾಸ್ತ್ರ ತಜ್ಞ ವೈದ್ಯರಾದ ಡಾ|| ವೆಂಕಟೇಶ್ ಮತ್ತು ಡಾ|| ಆಕಾಂಕ್ಷಾ ಪಾಂಡೆ ನೇತೃತ್ವದ ತಜ್ಞರ ತಂಡ ಎರಡು ದಿನಗಳ ಕಾಲ ಹಲವು ಶಾಲೆಗಳಲ್ಲಿ ಆಯೋಜಿಸಿದ್ದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಅಧ್ಯಯನ ಮಾಡುವ ಕ್ರಮ ಮತ್ತು ಪರೀಕ್ಷಾ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿತು.
ಪರೀಕ್ಷೆಯ ಸಂದರ್ಭದಲ್ಲಿ ಮಾನಸಿಕ ಒತ್ತಡ, ಆತಂಕ ಮತ್ತು ದುಗುಡವನ್ನು ಎದುರಿಸಿ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು, ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಗಳಿಸುವ ವಿಧಾನಗಳನ್ನು ತಿಳಿಸಿತು.
ಕಾರ್ಯಾಗಾರದ ಕುರಿತು ವಿವರ ನೀಡಿದ ಡಾ|| ವೆಂಕಟೇಶ್ ಮತ್ತು ಡಾ|| ಆಕಾಂಕ್ಷಾ ಪಾಂಡೆ ಮಕ್ಕಳು ಪರೀಕ್ಷೆಯ ಸಂದರ್ಭದಲ್ಲಿ ಅತಿ ಹೆಚ್ಚಿನ ಆತಂಕಕ್ಕೆ ಒಳಗಾಗಿ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ ಹಾಗಾಗಿ ಅವರಲ್ಲಿ ಖಿನ್ನತೆ ಆವರಿಸುತ್ತದೆ ಅಂತಹ ಸಂದರ್ಭದಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ದೊರೆಯದಿದ್ದಲ್ಲಿ ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದರು.
ಅತಿ ಹೆಚ್ಚು ಅಂಕವನ್ನು ಗಳಿಸಲೇಬೇಕು ಎಂಬ ಧಾವಂತ. ಜೊತೆಗೆ ಪೋಷಕರು ಮತ್ತು ಶಿಕ್ಷಕರ ಒತ್ತಡ ಇದಕ್ಕೆ ಮೂಲಕಾರಣ ಎಂದ ಅವರು ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಿ ಅವರಲ್ಲಿ ಧೈರ್ಯವನ್ನು ತುಂಬಿ ಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
Home ಸ್ಥಳಿಯ ಸುದ್ದಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಕುರಿತು ಮಾರ್ಗದರ್ಶನ ಮತ್ತು ತರಬೇತಿ ನೀಡಿದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಮನಶಾಸ್ತ್ರ...










