ಪ್ರವಾಸಿಗರಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಿ ಶರತ್ತು ಬದ್ದ ಅನುಮತಿಯನ್ನು ನೀಡಬೇಕು ಎಂದು ಅಬ್ಬುಗುಡಿಗೆ ಗ್ರಾಮಸ್ಥರ ಒತ್ತಾಯ…

319
firstsuddi

ಕಳಸ: ನಮ್ಮೂರಲ್ಲೊಂದು ಫಾಲ್ಸ್ ಇದೆ.ಇದು ಅಭಿವೃದ್ಧಿಗೊಂಡರೆ ನಮ್ಮೂರಿಗೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ.ಇದರಿಂದ ನಮ್ಮ ಊರು ಅಭಿವೃದ್ಧಿಗೊಳ್ಳುತ್ತದೆ ಎಂದು ಕನಸು ಕಂಡ ಗ್ರಾಮಸ್ಥರಿಗೆ ,ಪ್ರವಾಸಿಗರೆ ಗ್ರಾಮಕ್ಕೆ ಮುಳುವಾಗುತ್ತಾರೆ ಎಂದು ಅರ್ಥವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಕಳಸದಿಂದ ಐದು ಕಿ.ಮೀ ದೂರದ ಅಬ್ಬುಗುಡಿಗೆ ಎಂಬ ಗ್ರಾಮದಲ್ಲಿ ಅಬ್ಬಿ ಜಲಪಾತವೆಂಬ ನಾಮಾಂಕಿತದೊಂದಿಗೆ ಗುಪ್ತಗಾಮಿನಿಯಾಗಿ ತನ್ನಿಚ್ಚೆಯಂತೆ ಸ್ವಚ್ಚಂದವಾಗಿ ಬೆಟ್ಟದ ಮೇಲಿಂದ ಜುಳು ಜುಳು ಹರಿಯುತ ,ಸ್ಥಳೀಯ ಒಂದಷ್ಟು ಕೃಷಿ ಭೂಮಿಗೆ ಹಾಗೂ ಕುಡಿಯಲು ಶುದ್ಧ ನೀರುಣಿಸುತ್ತಿದ್ದ ಈ ಗುಪ್ತಗಾಮಿನಿ ತಣ್ಣಿಷ್ಟದಂತೆ ಇದ್ದಳು.ಇದನ್ನು ಯಾರೋ ಸುರುಮನೆ ಜಲಪಾತವೆಂಬ ನಾಮಕರಣ ಮಾಡಿ ಗೂಗಲ್‍ಗೆ ಅಪ್ಲೋಡ್ ಮಾಡಿದ ಪರಿಣಾಮ ಗುಪ್ತಗಾಮಿನಿಯಂತೆ ಹರಿಯುತ್ತಿದ್ದ ಈ ಜಲಪಾದ ಹೊರ ಪ್ರಪಂಚಕ್ಕೆ ಪರಿಚಯವಾಯ್ತು.ಮೊದಮೊದಲು ಇಲ್ಲಿಗೆ ಬರುವ ಪ್ರವಾಸಿಗರಿಂದ ನಮ್ಮ ಗ್ರಾಮಕ್ಕೆ ಉಪಕಾರವಾಗಬಹುದು ಎಂದು ತಿಳಿದುಕೊಂಡಿದ್ದ ಗ್ರಾಮಸ್ಥರಿಗೆ ಈಗ ಇಲ್ಲಿ ಅನೈತಿಕ ಚಟುವಟಿಕೆಗಳನ್ನು ಹೇಗೆ ಮಟ್ಟ ಹಾಕುವುದೆಂದು ದೊಡ್ಡ ಸವಾಲಿನ ಕೆಲಸವಾಗಿದೆ.

firstsuddi

ಪಾಲ್ಸ್ ನೋಡಲು ಸ್ಥಳಿಯರು ಸೇರಿದಂತೆ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.ಒಂದಷ್ಟು ಪ್ರವಾಸಿಗರು ಇಲ್ಲಿಯ ಸುಂದರವಾದ ಪರಿಸರವನ್ನು ಅಸ್ವಾದಿಸಿ ನೀರಿನಲ್ಲಿ ಮಿಂದು ತಮ್ಮ ಮನ ತಂಪಾಗಿಸಲು ಬರುತ್ತಿದ್ದರಾದೂ ಹೆಚ್ಚಿನ ಪ್ರವಾಸಿಗರು ಗುಂಡು ತುಂಡಿನೊಂದಿಗೆ ಮೋಜು ಮಸ್ತಿ ಮಾಡಲು ಬರುತ್ತಿದ್ದಾರೆ.ಪ್ರತೀ ನಿತ್ಯ ಪಾರ್ಟಿ ಮಾಡಿ ದಿನ ಕಳೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ಸ್ಥಳದಲ್ಲಿಯೇ ಟೆಂಟ್ ನಿರ್ಮಿಸಿ ಹಗಲು ರಾತ್ರಿಯೆನ್ನದೆ ಇಲ್ಲಿ ಠಿಕಾಣಿ ಹೂಡಿ ಮಾಡಬಾರದ್ದನ್ನು ಮಾಡಿ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡು ಆಗುತ್ತಿದೆ.
ಅರಣ್ಯ ಇಲಾಖೆಯ ಯಾವುದೇ ಅನುಮತಿಯನ್ನು ಪಡೆಯದೆ ಬೃಹತ್ ಗಾತ್ರದ ಜನರೇಟರ್ ಲೈಟ್‍ಗಳನ್ನು ಬಳಸಿ ಇಲ್ಲಿ ತಡ ರಾತ್ರಿಯವರೆಗೂ ಚಲನ ಚಿತ್ರದ ಶೂಟಿಂಗ್ ನಡೆಯುತ್ತಿರುವ ಹಲವಾರು ನಿದರ್ಶನಗಳು ಇಲ್ಲಿವೆ.ಇದರಿಂದ ರಾತ್ರಿ ಗ್ರಾಮಸ್ಥರಿಗೆ ಅಲ್ಲದೆ ಇಲ್ಲಿ ಪ್ರಾಣಿ ಪಕ್ಷಿಗಳಿಗೆ ತೊಂದರೆ ಉಂಟಾಗುತ್ತಿದೆ.ಅಲ್ಲದೆ ರಾತ್ರಿಯಿಡೀ ಹತ್ತಾರು ಯುವಕರ ತಂಡಗಳು ಪಾರ್ಟಿ ಮಾಡಿ ಬಾಟಲಿ ತ್ಯಾಜ್ಯಗಳನ್ನು ರಸ್ತೆಯುದ್ದಕ್ಕೂ ಇರುವ ಖಾಸಾಗಿ ತೋಟಗಳಿಗೆ ಎಸೆದು ಬೊಬ್ಬೆ ಹೊಡೆದು ಮೋಜು ಮಸ್ತಿ ಮಾಡುತ್ತಿದ್ದಾರೆ.ಇದನ್ನು ಪ್ರಶ್ನಿಸಲು ಸ್ಥಳಿಯರು ಹೋದರೆ ಪ್ರವಾಸಿಗರು ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ.ಇದರಿಂದ ರಾತ್ರಿಯಾಗುತ್ತಿದ್ದಂತೆ ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಓಡಾಡದ ಪರಿಸ್ಥಿತಿ ನಿರ್ಮಾಣವಾಗದೆ.
ಇದರಿಂದ ಗ್ರಾಮದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ.ದಿನದಿಂದ ದಿನಕ್ಕೆ ಗ್ರಾಮದಲ್ಲಿ ಇದರಿಂದ ಅಶಾಂತಿ ಉಂಟಾಗುತ್ತಿದ್ದು,ಇದಕ್ಕೆ ಕೂಡಲೇ ಅರಣ್ಯ ಇಲಾಖೆ ಕಡಿವಾಣ ಹಾಕಿ ಶರತ್ತು ಬದ್ದ ಅನುಮತಿಯನ್ನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಪಾಲ್ಸ್ ಗೆ ಹೋಗಲು ಅರಣ್ಯ ಇಲಾಖೆಯ ಜಾಗದಲ್ಲಿ ಅನುಮತಿ ನೀಡಬೇಕು.ಅಲ್ಲಿ ಒಂದು ಗೇಟ್ ನಿರ್ಮಿಸಿ ಒಬ್ಬ ಕಾವಲುಗಾರನನ್ನು ನೇಮಿಸಬೇಕು.ಪಾಲ್ಸ್ ಗೆ ಹೋಗುವವರಿಗೆ ದರ ನಿಗದಿಪಡಿಸಬೇಕು.ಇದಕ್ಕಾಗಿ ಒಂದು ಸಮಿತಿಯನ್ನು ರಚನೆ ಮಾಡಬೇಕು.ಯಾವುದೇ ಮದ್ಯಪಾನ ಹಾಗೂ ಪಾರ್ಟಿ ಮಾಡಲು ಅವಕಾಶವನ್ನು ನೀಡಬಾರದು.ಸಂಜೆ 6 ಗಂಟೆಯ ಮೇಲೆ ಪಾಲ್ಸ್‍ಗೆ ಹೋಗಲು ಯಾರಿಗೂ ಅವಕಾಶ ಕೊಡಬಾರದು ಎಂದು ಸ್ಥಳಿಯರು ಒತ್ತಾಯಿಸುತ್ತಿದ್ದಾರೆ.