ಅಪರಾಧಗಳನ್ನು ತಡೆಗಟ್ಟಲು ಪೊಲೀಸರ ಜೊತೆ ಸಾರ್ವಜನಿಕರು ಕೈಜೋಡಿಸಬೇಕು: ಡಿವೈಎಸ್‍ಪಿ ಜಹಗೀರ್‍ದರ್…

338
firstsuddi

ಕಳಸ: ಜನರಿಗೆ ಕಾನೂನಿನ ಅರಿವು ಇದ್ದರೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಪರಾಧಗಳನ್ನು ತಡೆಗಟ್ಟಲು ಪೊಲೀಸರ ಜೊತೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕೊಪ್ಪ ಡಿವೈಎಸ್‍ಪಿ ಜಹಗೀರ್‍ದರ್ ಹೇಳಿದರು.
ಕಳಸ ಪೊಲೀಸ್ ಠಾಣೆಯ ಆವರಣದಲ್ಲಿ ಸಾರ್ವಜನಿಕ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದ ಅವರು ನಾವು ಸಾಕುವ ಜಾನುವಾರುಗಳನ್ನು ರಾತ್ರಿಯಾಗುತ್ತಿದ್ದಂತೆ ಮನೆಯಲ್ಲಿ ಕಟ್ಟಿ ಹಾಕಿದರೆ ದನ ಕಳ್ಳತನಕ್ಕೆ ಅವಕಾಶನೇ ಇರೋದಿಲ್ಲ. ಜನಸಂಪರ್ಕ ಸಭೆಯಲ್ಲಿ ತಿಳಿಸಿದ ದೂರುಗಳಿಗೆ ಪರಿಹಾರ ಸಿಗುವುದಿಲ್ಲ ಎನ್ನುವ ಮಾತು ಬೇಡ. ನೀವು ನೀಡಿದ ದೂರುಗಳಿಗೆ ಪರಿಹಾರವನ್ನು ನೀಡಿ ಚಿತ್ರ ಸಹಿತ ವ್ಯಾಟ್ಸ್ ಆಪ್ ಮುಖಾಂತರ ತಿಳಿಸುವ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಹೇಳಿದರು.
ಇದಕ್ಕಿಂತ ಮುಂಚಿತವಾಗಿ ಸಾರ್ವಜನಿಕರು ಕಳಸದಲ್ಲಿ ಐಶ್ಯರಾಮಿ ಕಾರುಗಳಲ್ಲಿ ಬಂದು ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಠಾಣೆಯಲ್ಲಿ ಪಿಎಸೈ ಇಲ್ಲದೆ ಒಂಬತ್ತು ತಿಂಗಳುಗಳಾಯಿತು. ಶೀಘ್ರವಾಗಿ ನೇಮಕ ಮಾಡಬೇಕು. ರಸ್ತೆಯ ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಪ್ರತೀ ದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಆಟೋಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಕೆಲವರಲ್ಲಿ ಬೇಕಾದ ದಾಖಲಾತಿಗಳೇ ಇಲ್ಲ. ಅತೀಯಾದ ವೇಗದಲ್ಲಿ ಹೋಗುವ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪೊಲೀಸ್ ಠಾಣೆ ಸಮೀಪ ಇದ್ದ ಸಿಸಿ ಠೀವಿ ಕೆಟ್ಟು ಹೋಗಿ ಅದೆಷ್ಟೋ ವರ್ಷಗಳಾಗಿದೆ. ಕಳೆದ ಬಾರಿ ಜನ ಸಂಪರ್ಕ ಸಭೆಯಲ್ಲಿ ಒಂದೇ ದಿನದಲ್ಲಿ ಸರಿ ಪಡಿಸುತ್ತೇವೆ ಎಂದು ಹೇಳಿ ವರ್ಷವಾದರೂ ಸರಿಯಾಗಲಿಲ್ಲ. ಗ್ರಾಮಾಂತರ ಪ್ರದೇಶದಲ್ಲಿರುವ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮುಖ್ಯ ರಸ್ತೆಯಲ್ಲಿ ಶಾಲೆ ಬಿಡುವ ಸಂದರ್ಭದಲ್ಲಿ ಅತೀಯಾದ ವಾಹನ ದಟ್ಟನೆ ಹೆಚ್ಚಾಗುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಇದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಪುಟ್‍ಪಾತ್ ಗಳಿಗೆ ಹಾಕಿದ ಚಪ್ಪಡಿ ತುಂಡಾಗಿ ಇದರಲ್ಲಿ ನಡೆದುಕೊಂಡು ಹೋಗಲು ಸಾದ್ಯವಾಗುತ್ತಿಲ್ಲ. ಕೆಂಗನಕೊಂಡದಲ್ಲಿ ಕಾಲೋನಿಯೊಂದಕ್ಕೆ ಹೋಗುವ ರಸ್ತೆಗೆ ಕಾಂಕ್ರೇಟಿಕರಣಕ್ಕೆ ಅನುದಾನ ಬಿಡುಗಡೆಯಾಗಿ ರಸ್ತೆ ಜಲ್ಲಿ ತಂದು ಹಾಕಲಾಗಿದೆ .ಆದರೆ ಈಗ ಅರಣ್ಯ ಇಲಾಖೆ ಕಾಂಕ್ರೇಟಿಕರಣ ಮಾಡಲು ಬಿಡುತ್ತಿಲ್ಲ. ಚಿಕ್ಕಮಗಳೂರಿನ ಅಪರಿಚಿತ ವ್ಯಕ್ತಿಯೊಬ್ಬ ತನೂಡಿ ಬಾಗಕ್ಕೆ ಬಂದು ಮನೆ ಬಳಕೆ ಮತ್ತು ವಾಹನಗಳನ್ನು ತಂದುಕೊಡುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂ ಮೋಸ ಮಾಡಿದ್ದಾನೆ. ಈ ಬಗ್ಗೆ ಆತನನ್ನು ಕಳಸ ಪೊಲೀಸ್ ಠಾಣೆಗೆ ಕರೆ ತಂದು ಒಪ್ಪಿಸಿದರೂ ಪ್ರಕರಣ ದಾಖಲಿಸದೆ ಆತನನ್ನು ಬಿಟ್ಟು ಬಿಡಲಾಗಿದೆ ಎಂದು ಸಾರ್ವಜನಿಕರು ತಮ್ಮ ತಮ್ಮ ದೂರುಗಳನ್ನು ಹೇಳಿಕೊಂಡರು.
ಎಲ್ಲಾ ದೂರುಗಳನ್ನು ಆಲಿಸಿದ ಡಿವೈಎಸ್‍ಪಿ ಎಲ್ಲವನ್ನು ಬಗೆಹರಿಸುವ ಭರವಸೆಯನ್ನು ನೀಡಿ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕುದುರೆಮುಖ ವೃತ್ತ ನಿರೀಕ್ಷಕ ರಾಮಚಂದ್ರ,ತಾಲ್ಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ರಫೀಕ್,ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತಿರವೀಂದ್ರ,ಮುಖಂಡರಾದ ಕೆ.ಸಿ.ಧರಣೇಂದ್ರ,ವಿಶ್ವನಾಥ,ಸೋಮಯ್ಯ,ಜನಾರ್ಧನ,ರಾಮಮೂರ್ತಿ,ಅಬ್ದುಲ್ ಶುಕುರು,ರಿಜ್ವಾನ್,ರತ್ನವರ್ಮ ಇತರರು ಇದ್ದರು.