ಚಿಕ್ಕಮಗಳೂರು: ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರ ಠಾಣೆಗೆ ದೂರು ಸಲ್ಲಿಸಿದ ಜಿಲ್ಲಾ ಯುವ ಕಾಂಗ್ರೇಸ್…

1515
firstsuddi

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ಮತ್ತು ವಿಧಾನಸಭಾಧ್ಯಕ್ಷರ ಹುದ್ದೆಗಳಿಗೆ ಕಳಂಕ ತರುವುದರ ಜೊತೆಗೆ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಯುವ ಕಾಂಗ್ರೇಸ್ ನಗರ ಠಾಣೆಗೆ ಬುಧವಾರ ದೂರು ಸಲ್ಲಿಸಿತು.
ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಅವರ ನೇತೃತ್ವದಲ್ಲಿ ಸಂಜೆ ನಗರ ಠಾಣೆಗೆ ತೆರಳಿ ಠಾಣಾಧಿಕಾರಿ ರಕ್ಷಿತ್ ಅವರಿಗೆ ದೂರು ಸಲ್ಲಿಸಿದ ಕಾರ್ಯಕರ್ತರು ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಅದನ್ನು ಕೆಡವಿ ತಾವು ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರು ಕಾಂಗ್ರೇಸ್ ಮತ್ತು ಜೆಡಿಎಸ್ ಶಾಸಕರಿಗೆ ಅನೈತಿಕವಾಗಿ ಹಣ ಹಾಗೂ ಅಧಿಕಾರದ ಆಮಿಷ ತೋರಿಸುವುದು ಸೇರಿದಂತೆ ಹಲವು ರೀತಿಯ ಸಂವಿಧಾನ ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ನಡೆದ ಜೆಡಿಎಸ್ ಶಾಸಕರ ಪುತ್ರನೊಂದಿಗೆ ನಡೆಸಿರುವ ಮಾತುಕತೆಯಲ್ಲಿ ದೇಶದ ಪ್ರಧಾನಿ ವಿಧಾನಸಭಾಧ್ಯಕ್ಷರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಕಳಂಕ ಬರುವಂತಹ ಮಾತನಾಡಿರುವ ಯಡಿಯೂರಪ್ಪನವರ ನಡೆ ಹಾಗೂ ಶಾಸಕರುಗಳನ್ನು ಸೆಳೆಯುತ್ತಿರುವ ಕ್ರಮ ಅಕ್ಷಮ್ಯ ಅಪರಾಧವಾಗಿರುವ ನಿಟ್ಟಿನಲ್ಲಿ ಅವರ ವಿರುದ್ದ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಹರ್ಷವರ್ಧನ್, ಮುಖಂಡರಾದ ತಿಲಕ್ ಗೌಡ, ರಸೂಲ್ ಖಾನ್, ಪ್ರತಾಪ್, ನಾಗೇಶ್, ಮುನೀರ್, ಮಂಜು ಹಾಜರಿದ್ದರು.